ಶಿವಮೊಗ್ಗ : ಸೊರಬ ಪುರಸಭೆ ಅಧ್ಯಕ್ಷ ಎಂ ಡಿ ಉಮೇಶ್ ವಿರುದ್ಧ ಬಿಜೆಪಿ ಸೇರಿದಂತೆ ಸರ್ವ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಪುರಸಭೆಯ ಅಧ್ಯಕ್ಷರಾಗಿದ್ದ ಎಂ ಡಿ ಉಮೇಶ್ ಅವರು ಯಾವ ಸದಸ್ಯರ ಮಾತನ್ನು ಕೇಳದೆ, ವಾರ್ಡ್ ಸಮಸ್ಯೆಯನ್ನು ಪರಿಹರಿಸದೆ, ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಿದ್ದಾರೆಂದು ಅರೋಪಿಸಿ, ಕಳೆದ ತಿಂಗಳು ಪುರಸಭೆಯ ಎಲ್ಲಾ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಅದರಂತೆ ಇಂದು ಪುರಸಭೆಯ ಉಪಾಧ್ಯಕ್ಷರಾದ ಮಧುರಾಯ್ ಶೇಟ್ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು. ಇಂದು ನಡೆದ ಸಭೆಯಲ್ಲಿ ಎಂ ಡಿ ಉಮೇಶ್ ವಿರುದ್ಧ 11 ಮತಗಳು ಚಲಾವಣೆಗೊಂಡಿವೆ. ಇನ್ನು, ಅಧ್ಯಕ್ಷರಾಗಿದ್ದ ಎಂ ಡಿ ಉಮೇಶ್ ಅವರು ಸಭೆಗೆ ಹಾಜರಾಗಿರಲಿಲ್ಲ. ಇದರಿಂದ ಉಪಾಧ್ಯಕ್ಷ ಮಧುರಾಯ್ ಶೇಟ್ ಅವರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯವಾಗಿದೆ ಎಂದು ತಿಳಿಸಿದ್ದಾರೆ.
ಹಾಲಿ ಪುರಸಭೆಯಲ್ಲಿ ಬಿಜೆಪಿ 6, ಕಾಂಗ್ರೆಸ್ 4, ಜೆಡಿಎಸ್ ಹಾಗೂ ಪಕ್ಷೇತರ ತಲಾ ಒಬ್ಬರು ಸದಸ್ಯರು ಇದ್ದಾರೆ. ಈ ರೀತಿ ಅಧ್ಯಕ್ಷರ ವಿರುದ್ಧ ಪೂರ್ಣವಾಗಿ ವಿರೋಧ ವ್ಯಕ್ತವಾಗಿರೋದು ಇದೇ ಮೊದಲು ಎನ್ನಬಹುದು. ಅಧ್ಯಕ್ಷರ ಚುನಾವಣೆ ನಡೆಯುವವರೆಗೂ ಉಪಾಧ್ಯಕ್ಷರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
ಬಿಜೆಪಿಗೆ ಮುಖಭಂಗ : ಜಿಲ್ಲೆಯಲ್ಲಿ ಐದು ಜನ ಶಾಸಕರನ್ನು, ಜಿಲ್ಲಾಮಂತ್ರಿಯನ್ನು, ಸಿಎಂ ಹಾಗೂ ಪಿಎಂ ಹೊಂದಿದ್ದ ವೇಳೆಯಲ್ಲಿ ಈ ರೀತಿ ಬಿಜೆಪಿಗೆ ಮುಖಭಂಗ ಎಲ್ಲೂ ಆಗಿರಲಿಲ್ಲ. ಅಲ್ಲದೆ ಶಾಸಕ ಕುಮಾರ್ ಬಂಗಾರಪ್ಪನವರ ಆಪ್ತ ಉಮೇಶ್ ಅವರು ಪದಚ್ಯುತಿ ಆಗಿರುವುದು ಸೊರಬ ರಾಜಕಾರಣದಲ್ಲಿ ಸಂಚಲನವ ಉಂಟು ಮಾಡಿದೆ.