ಶಿವಮೊಗ್ಗ : ಜಿಲ್ಲೆಯಲ್ಲಿ ಮುಂಗಾರು ತಡವಾದರು ಸಹ ಸಣ್ಣದಾಗಿ ಪ್ರಾರಂಭಗೊಂಡಿದೆ. ಆದರೆ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಮಳೆ ಬಾರದೆ ಇದ್ದರೂ ಸಹ ವರುಣನ ಆಗಮನ ಮಲೆನಾಡ ರೈತರಿಗೆ ತುಸು ನೆಮ್ಮದಿ ತರಿಸಿದೆ. ಇನ್ನು ಜಗತ್ ಪ್ರಸಿದ್ಧ ಜೋಗ ಜಲಪಾತಕ್ಕೆ ಮಳೆಯಿಂದ ಜೀವಕಳೆ ಬಂದಂತೆ ಆಗಿದೆ.
ಮುಂಗಾರು ಸುಮಾರು 40 ದಿನ ತಡವಾದರೂ ಜೋಗದಲ್ಲಿ ಶರಾವತಿ ಬಳಕುತ್ತಾ ಮೇಲಿಂದ ಧುಮ್ಮಿಕ್ಕುತ್ತಿದ್ದಾಳೆ. ರಾಜಾ, ರಾಣಿ, ರೋರರ್, ರಾಕೆಟ್ ಎಂಬ ನಾಲ್ಕು ಕವಲುಗಳಲ್ಲಿ 960 ಅಡಿ ಎತ್ತರದಿಂದ ಶರಾವತಿ ನದಿ ಕೆಳಕ್ಕೆ ಬಿದ್ದು ಮುಂದೆ ಅರಬ್ಬಿ ಸಮುದ್ರಕ್ಕೆ ಸೇರ್ಪಡೆಯಾಗುತ್ತದೆ.
ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡು : ಮುಂಗಾರು ಮಳೆ ಚುರುಕುಗೊಳ್ಳುತ್ತಿದ್ದಂತೆಯೇ ಜೋಗ ವೀಕ್ಷಣೆಗೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜೋಗ ಜಲಪಾತವನ್ನು ನೋಡಲು ನಾಡಿನ ಎಲ್ಲಾ ಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜೋಗ ಅಭಿವೃದ್ಧಿ ಪ್ರಾಧಿಕಾರದಿಂದ ಹಲವು ಕಾಮಗಾರಿಗಳು ನಡೆಯುತ್ತಿರುವುದರಿಂದ ಪ್ರವಾಸಿಗರಿಗೆ ಸ್ವಲ್ಪ ಕಿರಿಕಿರಿ ಉಂಟಾಗುತ್ತಿದೆ.
ಪ್ರವಾಸ ಕೈಗೊಂಡು ಜೋಗ ನೋಡಲು ಬಂದಿದ್ದ, ಕನಕಪುರದ ನಿವಾಸಿ ರೇಖಾ ಅವರನ್ನು ಈಟಿವಿ ಭಾರತ ಪ್ರತಿನಿಧಿ ಮಾತನಾಡಿಸಿದಾಗ "ನಾನು ಇದೇ ಮೊದಲ ಬಾರಿ ಜೋಗ ಜಲಪಾತವನ್ನು ನೋಡಲು ಬಂದಿದ್ದೇನೆ. ಜೋಗ ನೋಡಲು ನಿಜಕ್ಕೂ ಸುಂದರವಾಗಿದೆ. ಕನಕಪುರದಿಂದ ನಾವೆಲ್ಲಾ ಕುಟುಂಬ ಸಮೇತ ಬಂದಿದ್ದೇವೆ. ಮಳೆ ಜಾಸ್ತಿ ಬಂದ್ರೆ ಇನ್ನಷ್ಟು ಚೆನ್ನಾಗಿರುತ್ತದೆ. ಮುಂದಿನ ಬಾರಿ ಮತ್ತೊಮ್ಮೆ ಜೋಗ ವೀಕ್ಷಣೆಗೆ ಬರುತ್ತೇವೆ'' ಎಂದು ಸಂತಸ ಹಂಚಿಕೊಂಡಿದ್ದಾರೆ.
ಇನ್ನು ಮೈಸೂರಿಮ ನಿವಾಸಿ, ರಂಜಿತ ರವರು ಈಟಿವಿ ಭಾರತ ಜೊತೆ ಮಾತನಾಡಿ, ನಾವು ಮೈಸೂರಿನಿಂದ ಕುಟುಂಬದ ಸಮೇತ ಜೋಗ ನೋಡಲು ಬಂದಿದ್ದೇವೆ. ಇಲ್ಲಿನ ವಾತಾವರಣ ಹಾಗೂ ಜೋಗ ಜಲಪಾತ ಚೆನ್ನಾಗಿದೆ. ಈ ಫಾಲ್ಸ್ ನೋಡಲು ಸುಂದರವಾಗಿದ್ದು, ನನ್ನ ಮಗನನ್ನು ಇದೇ ಮೊದಲ ಬಾರಿಗೆ ಇಲ್ಲಿಗೆ ಕರೆದುಕೊಂಡು ಬಂದಿದ್ದೇವೆ. ನಾವೆಲ್ಲಾ ಚೆನ್ನಾಗಿ ಎಂಜಾಯ್ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಬಳಿಕ ಸ್ಥಳೀಯರೇ ಆದ ನಾಗರಾಜ್ ಅವರು ಮಾತನಾಡಿ ಈ ಬಾರಿ ಮಳೆ ತಡವಾಗಿದೆ. ಆದರೂ ಸಹ ಪ್ರವಾಸಿಗರು ಜೋಗಕ್ಕೆ ಬರುತ್ತಿದ್ದಾರೆ. ಮುಂದೆ ಮಳೆ ಚೆನ್ನಾಗಿ ಆಗುವ ನಿರೀಕ್ಷೆ ಇದೆ. ಪ್ರವಾಸಿಗರು ಆಗ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಜೋಗ ಜಲಪಾತವನ್ನು ಮಳೆಗಾಲದಲ್ಲಿ ನೋಡುವುದೇ ಒಂದು ಅದ್ಬುತ. ಜೋಗ ಫಾಲ್ಸ್ಅನ್ನು ಮಳೆಯಲ್ಲಿ ನೋಡುತ್ತಿದ್ದರೆ ಅದರ ಅನುಭವವೇ ಬೇರೆಯಾಗಿರುತ್ತದೆ. ಮಳೆಯಾಗುತ್ತಿದ್ದಂತೆಯೇ ಇಲ್ಲಿ ಹರಿಯುವ ನೀರಿನ ರಭಸವು ಮನಮೋಹಕವಾಗಿರುತ್ತದೆ. ಇದರಿಂದ ಜೋಗ ಜಲಪಾತ ಪ್ರತಿ ಕ್ಷಣವು ಬದಲಾಗುತ್ತಿರುತ್ತದೆ. ಪ್ರತಿ ಬಾರಿ ನೋಡಿದಾಗಲೂ ಒಂದೊಂದು ಹೊಸ ಅನುಭವವನ್ನು ನೀಡುತ್ತದೆ. ಮಳೆ ಸುರಿದಾಗ ಒಂದೊಂದು ಕವಲುಗಳಲ್ಲಿ ಒಮ್ಮೊಮ್ಮೆ ನೀರಿನ ಹರಿವು ಹೆಚ್ಚಾಗುತ್ತದೆ. ಜೋಗ ಜಲಪಾತವನ್ನು ನೇರವಾಗಿ ನೋಡುವುದಕ್ಕೂ, ಬ್ರಿಟಿಷ್ ಬಂಗ್ಲೆ(ಶಿರಸಿ) ಭಾಗದಿಂದ ನೋಡುವುದಕ್ಕೂ ಬಹಳ ವ್ಯತ್ಯಾಸಗಳಿವೆ.
ಇದನ್ನೂ ಓದಿ : ಶ್ರೀಕ್ಷೇತ್ರ ಸೊಗಲ ಸೋಮೇಶ್ವರ ಜಲಪಾತಕ್ಕೆ ಬಂತು ಕಳೆ: ರೈತರಲ್ಲೂ ಹುರುಪು ತಂತು ಮಳೆ