ಶಿವಮೊಗ್ಗ: ಸಿಗಂದೂರು ದೇವಸ್ಥಾನಕ್ಕೆ ಸರ್ಕಾರ ನೇಮಿಸಿರುವ ಸಲಹಾ ಸಮಿತಿಯನ್ನು ರದ್ದುಗೊಳಿಸದಿದ್ದರೆ ಶಿವಮೊಗ್ಗದಿಂದ ಬೆಂಗಳೂರುವರೆಗಿನ ಪಾದಯಾತ್ರೆಯ ಹೋರಾಟದ ನೇತೃತ್ವವನ್ನು ನಾನೇ ವಹಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರದ ನಿರ್ಣಯದಿಂದಾಗಿ ಹಿಂದುಳಿದವರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಹಾಗಾಗಿ ಸರ್ಕಾರ ನೇಮಿಸಿರುವ ಸಲಹಾ ಸಮಿತಿಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಅನೇಕ ಪ್ರಸಿದ್ಧ ದೇವಾಲಯಗಳು ಖಾಸಗಿ ವ್ಯಕ್ತಿಗಳ ಕೈಯಲ್ಲಿವೆ. ಅವುಗಳು ಸಹ ವಿವಾದದಿಂದ ಹೊರತಾಗಿಲ್ಲ. ಎಲ್ಲಾ ದೇವಸ್ಥಾನಗಳಿಗೂ ಸಲಹಾ ಸಮಿತಿ ನೇಮಿಸಲಿ ನೋಡೋಣ ಎಂದು ಸವಾಲು ಹಾಕಿದರು.
ಸಿಗಂದೂರು ದೇವಸ್ಥಾನಕ್ಕೆ ಸಲಹಾ ಸಮಿತಿ ರಚಿಸುವ ಮೂಲಕ ಯಡಿಯೂರಪ್ಪನವರು ಹಿಂದುಳಿದ ವರ್ಗಗಳ ವಿರುದ್ಧವಾಗಿದ್ದಾರೆ ಎಂದು ಕಾಣುತ್ತದೆ ಎಂದರು. ಹಿಂದುತ್ವವಾದಿಗಳು ಮೊದಲು ಬೇರೆ ಧರ್ಮೀಯರ ಪೂಜಾ ಸ್ಥಳವನ್ನು ಕೆಡವಿದರು. ಈಗ ಹಿಂದುತ್ವವಾದಿಗಳು ಹಿಂದೂ ಧರ್ಮದ ಸಂಪ್ರದಾಯಗಳನ್ನು ಬಲಾತ್ಕಾರವಾಗಿ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ ಎಂದರು. ಬಿಜೆಪಿ ಜನವಿರೋಧಿ ಕಾರ್ಯಕ್ರಮ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ಮೊದಲಿದೆ. ಇವರ ಬಳಿ ಜನಹಿತ ಕೆಲಸಗಳಿಗೆ ಸಮಯ ಇಲ್ಲ ಎಂದು ಆಕ್ರೋಶ ಹೊರಹಾಕಿದ್ರು.