ಶಿವಮೊಗ್ಗ: ಯಡಿಯೂರಪ್ಪ ಅವರ ಪುತ್ರ ಎಂದು ಹೇಳಿ ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ. ವಿಜಯೇಂದ್ರ ನೇಮಕ ಕುರಿತು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಅವರು ಮಾತನಾಡಿದರು. ಈ ವೇಳೆ, ಶಾಸಕರು ರಾಜ್ಯದ ಅಧ್ಯಕ್ಷ ಆಗಿರುವಂತಹ ಬಿ.ವೈ ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸಿದರು.
ಬಳಿಕ ಮಾತನಾಡಿ, ಯಡಿಯೂರಪ್ಪ ಮಗ ಇಂದು ರಾಜ್ಯ ಅಧ್ಯಕ್ಷರಾಗಿದ್ದಾರೆ. ಬಹುಶಃ 6 ತಿಂಗಳ ನಂತರ ಜ್ಞಾನೋದಯ ಆಗಿ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದಾಗ ಸ್ವಲ್ಪ ನೆಮ್ಮದಿಯಾಯಿತು. ವಿರೋಧ ಪಕ್ಷದವರಿಗೆ ಯಾವತ್ತೂ ನಮ್ಮ ಜೊತೆಗೆ ವಾದ ಮಾಡಲು, ಮಾತನಾಡಲು ಶಕ್ತಿ ಇದ್ದಿರಲಿಲ್ಲ. ಈಗ ವಿಜಯೇಂದ್ರ ಆಯ್ಕೆಯಾಗಿದೆ ಎಂದರು.
ಪಕ್ಷದಲ್ಲಿ ಹಿರಿಯರು ತುಂಬಾ ಜನರಿದ್ದರು. ಆದರೆ, ಯಡಿಯೂರಪ್ಪನವರ ಪುತ್ರ ಎಂದು ಹೇಳಿ ವಿಜಯೇಂದ್ರ ಅವರಿಗೆ ಸ್ಥಾನ ನೀಡಲಾಗಿದೆ. ನಾನು ಇದಕ್ಕೆ ಬೇಡ ಎನ್ನುವುದಿಲ್ಲ. ಆದರೆ, ಇದು ಮುಳ್ಳಿನ ಹಾಸಿಗೆ ಬಹಳ ಎಚ್ಚರದಿಂದಿರಬೇಕು ಎಂದು ಸಲಹೆ ನೀಡಿದ್ದಾರೆ. ಏಕೆಂದರೆ ಯತ್ನಾಳ್ ಅವರು ರಾಜ್ಯಾಧ್ಯಕ್ಷ ಸ್ಥಾನ ನನಗೆ ನೀಡುತ್ತಾರೆ ಎಂದು ಕೊಂಡಿದ್ದರು. ಇವರಲ್ಲದೇ ವಿರೋಧ ಪಕ್ಷದಲ್ಲಿ ಸ್ಥಾನಕ್ಕಾಗಿ ಬೇರೆಯವರು ಕಾಯುತ್ತಿದ್ದರು.
ಸ್ವತಃ ಯತ್ನಾಳ್ ಅವರೇ ಏನ್ರೀ ಯಡಿಯೂರೂಪ್ಪ ಅವರ ಮಗ ವಿಜಯೇಂದ್ರ 10 ಸಾವಿರ ಕೋಟಿ ರೂ. ಮಾಡಿ ದುಬೈನಲ್ಲಿ ಇಟ್ಟು ಬಂದಿದ್ದಾರೆ ಎಂದು ಹೇಳಿದ್ದರು. ಇವತ್ತು ವಿಜಯೇಂದ್ರ ಅಧಿಕಾರ ಪಡೆದಿದ್ದಾರೆ. ನಾವು ಕಾಂಗ್ರೆಸ್ ಸರ್ಕಾರ ಗಟ್ಟಿಯಾಗಿ 136 ಸ್ಥಾನ ಗೆದ್ದಿದ್ದೇವೆ. ಯಡಿಯೂರಪ್ಪ ಅವರ ಆಶ್ರಯ ನೇತೃತ್ವದಲ್ಲೇ ಪಕ್ಷ 50 ರಿಂದ 60 ಸ್ಥಾನಕ್ಕೆ ಬಂದಿತ್ತು. ಹೀಗಾಗಿ ಈಗ ವಿಜಯೇಂದ್ರ ಅವರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ಅವರ ಪಕ್ಷಕ್ಕೆ ನಷ್ಟವಾಗಿರಬಹುದು. ನಮಗೆ ಇದರಿಂದ ಲಾಭವಾಗಿದೆ. ಆದರೆ ವಿಜಯೇಂದ್ರ ಅವರಿಗೆ ಯುವಕನಾಗಿ ಸ್ಥಾನ ನೀಡಿದ್ದಾರೆ, ಅವರಿಗೆ ಮತ್ತೊಮ್ಮೆ ಅಭಿನಂದನೆಗಳು ಎಂದರು.
ಬೇಳೂರು ವಿರುದ್ಧ ಕಾಂಗ್ರೆಸ್ ನಿಯೋಗ ದೂರು ವಿಚಾರ: ನನ್ನ ವಿರುದ್ಧ ಕಾಂಗ್ರೆಸ್ನ ನಿಯೋಗ ದೂರು ಕೊಟ್ಟಿದ್ದಾರೆ. ಅದರ ಬಗ್ಗೆ ಪ್ರಶ್ನೆ ಮಾಡಲು ಹೋಗಲ್ಲ. ಈ ಕುರಿತು ರಾಜ್ಯ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ಸಣ್ಣ-ಪುಟ್ಟ ಸಮಸ್ಯೆ ಸರಿಪಡಿಸುತ್ತಾರೆ ಎಂದರು. ಬಳಿಕ ಸುದ್ದಿಗಾರರು ಪಕ್ಷದಲ್ಲಿ ಸೈಲಂಟ್ ಆಗಿ ಇರಲು ಸೂಚಿಸಿದ್ದಾರಾ ಎಂಬ ಪ್ರಶ್ನೆಗೆ ನನಗೆ ಸೈಲೆಂಟ್ ಆಗಿ ಇರು ಅಂತಾ ಯಾರು ಹೇಳಿಲ್ಲ. ಸೈಲೆಂಟ್ ಆಗುವ ವ್ಯಕ್ತಿ ನಾನಲ್ಲ ಎಂದು ಗುಡುಗಿದರು.
ಇದನ್ನೂ ಓದಿ: ಲಿಂಗಾಯತ ಮತ ಬ್ಯಾಂಕ್ಗೋಸ್ಕರ ವಿಜಯೇಂದ್ರಗೆ ಅಧ್ಯಕ್ಷ ಸ್ಥಾನ: ಸಚಿವ ಸತೀಶ ಜಾರಕಿಹೊಳಿ