ಶಿವಮೊಗ್ಗ: ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರನ್ನ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಇಂದು ನಗರದಲ್ಲಿ ನಡೆದಿದೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಕ್ರವರ್ತಿ ಸೂಲಿಬೆಲೆ ಹಾಗೂ ತೇಜಸ್ವಿ ಸೂರ್ಯ ಹೊಗಳು ಭಟ್ಟರು. ಇವರಿಬ್ಬರು ಕೇಂದ್ರ ಸರ್ಕಾರದ ಬಗ್ಗೆ ಹೊಗಳಿ ಮಾತನಾಡುತ್ತಾರೆ. ನರೇಂದ್ರಮೋದಿ ಪ್ರಧಾನಿಯಾದ ಬಳಿಕ ಸೈನಿಕರು ಸತ್ತಿಲ್ಲವೇ. ಪುಲ್ವಾಮಾ ದಾಳಿಯಲ್ಲೇ 40 ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದಾರೆ. ಈರುಳ್ಳಿ ಬೆಲೆ 200 ರೂಪಾಯಿ ತಲುಪಿದಾಗ ಈ ಇಬ್ಬರು ಎಲ್ಲಿಗೆ ಹೋಗಿದ್ದರು. ಏಕೆ ಮಾತನಾಡಲಿಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಗಗನಕ್ಕೇರಿದರೂ ತುಟಿಬಿಚ್ಚುತ್ತಿಲ್ಲ. ಇದೇನಾ ಅಚ್ಛೇ ದಿನ್ ಎಂದು ಪ್ರಶ್ನಿಸಿದರು.
ಎಸ್.ಎಲ್.ಬೈರಪ್ಪ ಬಿಜೆಪಿಯ ಏಜೆಂಟ್. ಹಾಗಾಗಿಯೇ ಅವರ ಹೆಸರಿನಲ್ಲಿ ಬಜೆಟ್ನಲ್ಲಿ ಐದುಕೋಟಿ ಮೀಸಲಿಟ್ಟಿದ್ದಾರೆ. ಯಾವುದೇ ವ್ಯಕ್ತಿ ಸತ್ತಮೇಲೆ ಅವರ ಅಂತ್ಯ ಸಂಸ್ಕಾರಕ್ಕೆ ಹಣ ನೀಡುವುದನ್ನು ನೋಡಿದ್ದೇನೆ. ಆದರೆ, ಭೈರಪ್ಪ ಅವರ ಗ್ರಾಮಕ್ಕೆ ಯಾವ ಉದ್ದೇಶಕ್ಕೆ ಹಣ ನೀಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಶಾಲೆಗಳೇ ಇಲ್ಲ. ಭೈರಪ್ಪ ಅವರ ಊರಿಗೆ ನೀಡಿದ ಅನುದಾನವನ್ನು ಉತ್ತರ ಕರ್ನಾಟಕದ ಶಾಲೆಗಳಿಗೆ ನೀಡಬಹುದಿತ್ತು ಎಂದರು.
ನಲಪಾಡ್ ಕಾರು ಆಕ್ಸಿಡೆಂಟ್ ಆದಾಗ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡಿದ್ದರು. ಅದೇ ಅಶೋಕ್ ಮಗನ ಕಾರು ಅಪಘಾತವಾದಾಗ ಯಾರೂ ಚಕಾರವೆತ್ತಲಿಲ್ಲ. ನಲಪಾಡ್ ಪ್ರಕರಣದಲ್ಲಿ ಮಾತನಾಡಿದ್ದ ಆರ್.ಅಶೋಕ್ ತನ್ನ ಮಗನ ಕಾರು ಅಪಘಾತವಾಗುತ್ತಿದ್ದಂತೆ ಮೌನಕ್ಕೆ ಶರಣಾಗಿದ್ದಾರೆ.
ಶರತ್ ಬಚ್ಚೇಗೌಡ ಪಕ್ಷದಿಂದ ದೂರ ಹೋದರೆ ಪಕ್ಷಕ್ಕೆ, ತಾಯಿಗೆ ದ್ರೋಹ ಮಾಡಿದಂತೆ ಎಂದು ಸಿ.ಟಿ.ರವಿ ಹಾಗೂ ಆರ್.ಅಶೋಕ್ ಹೇಳುತ್ತಾರೆ. ಅದೇ ಕಾಂಗ್ರೆಸ್ನ 17 ಜನ ಶಾಸಕರನ್ನು ಬಿಜೆಪಿಗೆ ಸೆಳೆದರು ಅದಕ್ಕೇನು ಹೇಳುತ್ತಾರೆ. ಈ 17 ಜನ ಮಾತೃದ್ರೋಹ ಮಾಡಿಲ್ಲವೆ ಎಂದು ವ್ಯಂಗ್ಯವಾಡಿದರು.