ಶಿವಮೊಗ್ಗ: ಯುವಕನೋರ್ವ ತನಗೆ ಕೆಲಸ ನೀಡಿದ ಮೇಸ್ತ್ರಿಯ ಮಗಳನ್ನೇ ಪುಸಲಾಯಿಸಿ ಕರೆದುಕೊಂಡು ಹೋಗಿದ್ದ. ಬಾಲಕಿಯ ಪೋಷಕರು ದೂರು ದಾಖಲಿಸಿದ 48 ಗಂಟೆಯಲ್ಲಿ ಪೊಲೀಸರು ಇವರನ್ನು ಪತ್ತೆ ಹಚ್ಚಿದ್ದಾರೆ. ಕೆಲಸಕ್ಕೆ ಬಂದಿದ್ದ ತಮಿಳುನಾಡು ಮೂಲದ ಯುವಕನೋರ್ವ ಪುಸಲಾಯಿಸಿ ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋಗಿದ್ದ ಎಂದು ತಿಳಿದುಬಂದಿದೆ.
ಈ ಬಗ್ಗೆ ತನ್ನ ಮಗಳು ಕಾಣೆಯಾಗಿದ್ದಾಳೆಂದು ಅಪ್ರಾಪ್ತೆಯ ತಂದೆ ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಮಾಳೂರು ಪೊಲೀಸರು 48 ಗಂಟೆಯೊಳಗಾಗಿ ಅಪ್ರಾಪ್ತೆಯನ್ನು ತಮಿಳುನಾಡಿನಲ್ಲಿ ಪತ್ತೆ ಮಾಡಿದ್ದಾರೆ. ತಮಿಳುನಾಡು ಮೂಲದ ಯುವಕನೋರ್ವ ಹೊನ್ನಾಳಿ ಭಾಗದಲ್ಲಿ ಕೆಲಸ ಮಾಡಿಕೊಂಡಿದ್ದ. ಬಳಿಕ ಈತನ ಪರಿಚಯಸ್ಥರ ಮೂಲಕ ಮಾಳೂರಿನ ಮೇಸ್ತ್ರಿಯ ಪರಿಚಯವಾಗಿತ್ತು. ಈ ಮೇಸ್ತ್ರಿ ಯುವಕನಿಗೆ ಕೆಲಸ ನೀಡಿದ್ದರು.
ಯುವಕ 15 ದಿನಗಳ ಕಾಲ ಮೇಸ್ತ್ರಿಯ ಬಳಿ ಕೆಲಸ ಮಾಡಿದ್ದಾನೆ. ಈ ನಡುವೆ ಮೇಸ್ತ್ರಿಯ ಅಪ್ರಾಪ್ತ ವಯಸ್ಸಿನ ಮಗಳನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದಾನೆ. ಇಬ್ಬರು ಸೇರಿ ತಮ್ಮೂರಿಗೆ ಹೋಗಿ ಮದುವೆ ಆಗೋಣ ಎಂದು ಕರೆದುಕೊಂಡು ಹೋಗಿದ್ದಾನೆ. ಬಳಿಕ ಯುವಕ ಬಾಲಕಿಯನ್ನು ತಮಿಳುನಾಡಿನ ವೆಲ್ಲೂರಿ ಕರೆದೊಯ್ದಿದ್ದಾನೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಾಳೂರು ಪಿಎಸ್ಐ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಬಾಲಕಿಯ ಜೊತೆಗೆ ಆರೋಪಿಯನ್ನು ಅಲ್ಲಿಂದ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಓದಿ : ಬ್ರೇಕಪ್ ಸೇಡು.. ಗೆಳತಿಯ ಮುಖದ ಮೇಲೆ ತನ್ನ ಹೆಸರು ಹಚ್ಚೆ ಹಾಕಿ ವಿಕೃತಿ ಮೆರೆದ ಪಾಗಲ್ಪ್ರೇಮಿ