ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಸಹಕಾರಿ ಬ್ಯಾಂಕ್ನಲ್ಲಿ ನಡೆದಿರುವ ಬಹುಕೋಟಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ನಿಯೋಗ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ಗೆ ಮನವಿ ಸಲ್ಲಿಸಿದೆ.
ಮನವಿ ಸ್ವೀಕರಿಸಿ ಮಾತನಾಡಿದ ಸೋಮಶೇಖರ್ ಡಿಸಿಸಿ ಬ್ಯಾಂಕ್ ಸಂಸ್ಥೆಯನ್ನು ಉಳಿಸಬೇಕಿದೆ. ಇಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಸಹಕಾರ ಇಲಾಖೆ ತನಿಖೆ ಪ್ರಾರಂಭಿಸಿದೆ. ಇದಕ್ಕಾಗಿ ಸಹಕಾರಿ ಬ್ಯಾಂಕ್ ಗಳ ಮೇಲೆ ದಾಳಿ ನಡೆಸಲಾಗಿದೆ. ಡಿಸಿಸಿ ಬ್ಯಾಂಕ್ ನ ಎಂಡಿ ರವರು ತನಿಖೆಗೆ ಬಂದವರ ಮೇಲೆ ದೌರ್ಜನ್ಯ ನಡೆಸಿ, ರೌಡಿ ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿ ಬಂದಿದೆ. ಈ ಕುರಿತು ವರದಿ ಬಂದಾಗ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಈ ಸಂಸ್ಥೆಯನ್ನು ಉಳಿಸುವ ಸಲುವಾಗಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಡಿಸಿಸಿ ಬ್ಯಾಂಕ್ನ ಅಧ್ಯಕ್ಷರು ಸೇರಿದಂತೆ ಯಾರೇ ತಪ್ಪು ಮಾಡಿದ್ದರೂ ಸಹ ಕ್ರಮ ಜರುಗಿಸಲಾಗುವುದು. ಇದಕ್ಕಾಗಿ ವರದಿಗಾಗಿ ಕಾಯುತ್ತಿದ್ದೇವೆ. ವರದಿ ಬಂದ ನಂತರ ಶಿವಮೊಗ್ಗ ಜಿಲ್ಲೆಯ ಎಲ್ಲಾ ನಾಯಕರ ಜೊತೆ ಕುಳಿತು ಚರ್ಚೆ ನಡೆಸಲಾಗುವುದು ಎಂದರು.
ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ:
ರಾಜ್ಯ ಬಿಜೆಪಿ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ನಮ್ಮ ಪಕ್ಷದ ಶಾಸಕರು ಸೇರಿಕೊಂಡಿದ್ದು, ಮೂರು ತಿಂಗಳ ಹಿಂದೆ. ಇದು ಹಳೆಯ ವಿಡಿಯೋ. ಊಟಕ್ಕೆ ಒಂದು ಕಡೆ ಸೇರುವುದು ಸಹಜ. ಯಡಿಯೂರಪ್ಪನವರು ಹೇಳಿದಂತೆ ನಡೆಯುತ್ತಾರೆ. ಅದು ನಮ್ಮ ವಿಷಯದಲ್ಲಿ ಸತ್ಯವಾಗಿದೆ. ತಾಳ್ಮೆಯಿಂದ ಇದ್ದರೆ ಎಲ್ಲವೂ ಸಾಧ್ಯವಾಗುತ್ತದೆ ಎಂದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ. ನಗರಾಭಿವೃದ್ದಿ ಖಾತೆ ಸಚಿವ ಬಸವರಾಜ್, ಸಂಸದ ರಾಘವೇಂದ್ರ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಸೇರಿ ಇತರರು ಹಾಜರಿದ್ದರು.