ಶಿವಮೊಗ್ಗ : ಯಾವುದೇ ರೋಗಕ್ಕೆ ಔಷಧಿಗಿಂತ ಮುಂಜಾಗ್ರತೆಯೇ ಮದ್ದು. ಈ ಹಿನ್ನೆಲೆ ಕೊರೊನಾದಿಂದ ದೂರ ಇರಬೇಕಾದ್ರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕಾಗುತ್ತದೆ. ಆದ್ದರಿಂದ ನಮ್ಮ ಕ್ಷೇತ್ರದ ಜನತೆಗೆ ಉಚಿತ ಆರ್ಯವೇದದ ಔಷಧಿ ನೀಡಲು ತಯಾರಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪನವರು ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಗಿರಿಧರ್ ಕಜೆ ಅವರು ತಯಾರು ಮಾಡಿರುವ ಆರ್ಯವೇದ ಔಷಧಿಯನ್ನು ಕ್ಷೇತ್ರದ ಪ್ರತಿ ಮನೆ ಮನೆಗೆ ತಲುಪಿಸುವ ಯತ್ನಕ್ಕೆ ಕೈ ಹಾಕಿರುವುದಾಗಿ ತಿಳಿಸಿದರು.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 85 ಸಾವಿರ ಮನೆಗಳಿವೆ. ಇಲ್ಲಿ ಸರಿ ಸುಮಾರು 4 ಲಕ್ಷ ಜನ ಸಂಖ್ಯೆಯಿದೆ. ಪ್ರತಿಮನೆಯ ಪ್ರತಿ ವ್ಯಕ್ತಿಗೂ ಸಹ ಡಾ. ಗಿರಿಧರ್ ಕಜೆ ಅವರು ತಯಾರಿಸಿರುವ ಆಯಿಷ್ ಕ್ವಾಥ್ ಚೂರ್ಣ, ಶಂಶಮನವಟಿ ಹಾಗೂ ಅರ್ಸೇನಿಕ್ ಆಲ್ಬಂಗಳನ್ನು ಒಳಗೊಂಡ ಒಂದು ಒಂದು ಕಿಟ್ ನೀಡಲಾಗುತ್ತಿದೆ. ಈ ಕಿಟ್ಗೆ 500 ರೂ. ಆಗುತ್ತದೆ. ಇದರಿಂದ ಇದನ್ನು ಜನರಿಗೆ ಉಚಿತವಾಗಿ ನೀಡಲು ಚಿಂತನೆ ನಡೆದಿದೆ ಎಂದರು.
ಆರ್ಯವೇದ ಔಷಧ ವಿತರಣೆಗೆ ಕೋವಿಡ್ ಸುರಕ್ಷಾ ಪಡೆ ರಚನೆ : ಆಯುರ್ವೇದ ಔಷಧ ವಿತರಣೆ ಮಾಡಲು ಹಾಗೂ ಅದಕ್ಕೆ ಹಣದ ಹೊಂದಾಣಿಕೆ ಹೇಗೆ ಮಾಡಬೇಕು ಎಂಬುದರ ಬಗ್ಗೆ ಒಂದು ಸಮಿತಿ ರಚನೆ ಮಾಡಲಾಗಿದೆ. ಇದರ ಅಧ್ಯಕ್ಷರಾಗಿ ತಾವು, ಗೌರವಾಧ್ಯಕ್ಷರಾಗಿ ಸಂಸದ ಬಿ ವೈ ರಾಘವೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯರುಗಳು ಉಪಾಧ್ಯಕ್ಷರಾಗಿ ಇರುತ್ತಾರೆ ಎಂದರು.
ಔಷಧ ಬೇಕು ಅಂದ್ರೆ ಆಧಾರ ಕಾರ್ಡ್ ಕಡ್ಡಾಯ : ಆರ್ಯವೇದದ ಔಷಧ ವಿತರಣೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ತೋರಿಸಬೇಕಿದೆ. ಮನೆಯಲ್ಲಿ ಎಷ್ಟು ಜನ ಇದ್ದಾರೋ, ಅಷ್ಟು ಜನರ ಆಧಾರ್ ಕಾರ್ಡ್ ತೋರಿಸಬೇಕಿದೆ. ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವುದರಿಂದ ಜನ ನೂಕು ನುಗ್ಗಲು ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಜನತೆಗೆ ಬೂಸ್ಟರ್ ಕಿಟ್ ಹಂಚಲು ಡಾ.ಗಿರಿಧರ್ ಕಜೆಯವರು ಜುಲೈ 29ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಅಂದು ಈ ಆರ್ಯವೇದ ಕಿಟ್ ವಿತರಣೆ ಮಾಡಲಾಗುವುದು. ಪ್ರತಿ ಮನೆಗೂ ನಮ್ಮ ತಂಡದವರು ಬಂದಾಗ ಆಧಾರ್ ಕಾರ್ಡ್ ತೋರಿಸಬೇಕು ಎಂದರು.
ಸದ್ಯಕ್ಕೆ 1 ಲಕ್ಷ ಕಿಟ್ ಮೊದಲು ಬರಲಿದೆ. ತಕ್ಷಣ ಅದನ್ನು ವಿತರಣೆ ಮಾಡಲಾಗುವುದು. ನಂತರ ಕಿಟ್ಗಳು ಬಂದ ರೀತಿ ಹಂಚಲಾಗುವುದು. ಕೋವಿಡ್ ಸುರಕ್ಷ ಪಡೆಗೆ ದಾನಿಗಳು ಹಣವನ್ನು ನೀಡಬಹುದು. ಇದಕ್ಕಾಗಿ ಬ್ಯಾಂಕ್ ಆಫ್ ಬರೋಡಾದಲ್ಲಿ ಖಾತೆ ತೆರೆಯಲಾಗಿದೆ. ಇಲ್ಲಿ ಹಣವನ್ನು ಜಮೆ ಮಾಡಬಹುದು. ಕೊರೊನಾದಿಂದ ದೂರವಿರಲು ಈ ಕಿಟ್ ಸಹಕಾರಿಯಾಗುತ್ತದೆ ಎಂದರು. ಈ ವೇಳೆ ಡಿ ಎಸ್ ಅರುಣ್, ಕೆ ಈ ಕಾಂತೇಶ್ ಸೇರಿ ಇತರರು ಹಾಜರಿದ್ದರು.