ಶಿವಮೊಗ್ಗ : ಅಂದು ಅಮ್ಮ ಕಪಾಳಕ್ಕೆ ಹೊಡೆದಿದಕ್ಕೆ ಇಂದು ನಿಮ್ಮ ಮುಂದೆ ಮೈಕ್ ಹಿಡಿದು ಮಾತನಾಡುತ್ತಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ನಗರದ ವೀರಭದ್ರ ಚಿತ್ರಮಂದಿರದಲ್ಲಿ ಆಯೋಜಿಸಿದ್ದ ಸೇವಾ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನ ಅಮ್ಮ ಅಡಿಕೆ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆಗಾಗ ನಾನು ಎಸ್ಎಸ್ಎಲ್ಸಿಯಲ್ಲಿ ಉತ್ತೀರ್ಣನಾಗಿ ಮುಂದೆ ನಾನು ಓದಲ್ಲ, ಯಾವುದಾದರೂ ಅಂಗಡಿಯಲ್ಲಿ ಗುಮಾಸ್ತನಾಗಿ ನಿನಗೆ ದುಡಿದು ಸಾಕುತ್ತೇನೆ ಎಂದು ಅಮ್ಮನ ಬಳಿ ಹೇಳಿದೆ.
ಆಗ ಅಮ್ಮ, ಕಪಾಳಕ್ಕೆ ಹೊಡೆದು ನೀನು ವಿದ್ಯಾವಂತನಾಗಿ ದುಡಿದು ನನ್ನನ್ನು ಸಾಕೋದು ಬೇಡ, ನನ್ನ ಜೀವ ಇರುವವರೆಗೂ ನಾನು ನಿನಗೆ ದುಡಿದು ಸಾಕುತ್ತೇನೆ ಎಂದಿದ್ದರು. ಹಾಗಾಗಿ, ಡಿಗ್ರಿ ಓದಿ ಇದೀಗ ನಿಮ್ಮ ಮುಂದೆ ಸಚಿವನಾಗಿ ಮೈಕ್ ಹಿಡಿದು ಮಾತನಾಡುತ್ತಿದ್ದೇನೆ. ಇದಕ್ಕೆ ಹೆಣ್ಣು ಎಂಬ ಅಮ್ಮ ಕಾರಣ ಎಂದು ತಮ್ಮ ತಾಯಿಯನ್ನು ನೆನಪಿಸಿಕೊಂಡರು.
ಬೇರೆ ದೇಶದಲ್ಲಿ ಹೆಣ್ಣನ್ನು ಭೋಗದ ವಸ್ತುವಾಗಿ ನೋಡುತ್ತಾರೆ. ಆದರೆ, ಹೆಣ್ಣನ್ನು ತಾಯಿ ಎಂದು ಕರೆಯುವ ನಮ್ಮ ದೇಶದಲ್ಲಿ ಹೆಣ್ಣಿಗೆ ಗೌರವ ಕೊಡುತ್ತೇವೆ. ನಾವು ಮಹಿಳೆಯರಿಗೆ ಕೊಟ್ಟಿರುವ ಸ್ವತಂತ್ರವನ್ನು ದುರ್ಬಳಕೆ ಮಾಡಿಕೊಳ್ಳಬಾರದು. ತಲಾಖ್ ಸಂಸ್ಕೃತಿಯನ್ನು ತೆಗೆದು ಹಾಕಿದ್ದರಿಂದ ಇಂದು ಮುಸ್ಲಿಂ ಮಹಿಳೆಯರು ಪ್ರಧಾನಮಂತ್ರಿಯನ್ನು ಮೋದಿ ಭಾಯ್ ಎಂದು ಕರೆಯುತ್ತಿದ್ದಾರೆ ಎಂದರು.
ಇದನ್ನೂ ಓದಿ: ಮಕ್ಕಳ ಕಳ್ಳಿ ಎಂದು ಭಿಕ್ಷೆ ಬೇಡುತ್ತಿದ್ದ ಮಹಿಳೆ ಮೇಲೆ ಅಮಾನವೀಯ ಹಲ್ಲೆ.. ವಿಡಿಯೋ ವೈರಲ್