ಶಿವಮೊಗ್ಗ: ಸರ್ಕಾರ ಅಭಿವೃದ್ದಿ ಕೆಲಸಗಳಿಗೆ ಅನುದಾನ ಕೊರತೆ ಮಾಡಿಲ್ಲ. ಹಾಗಿದ್ದರೂ ರಸ್ತೆ ಗುಂಡಿಗಳನ್ನು ಮುಚ್ಚಲು ಯಾಕೆ ವಿಳಂಬ? ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಜನವರಿ 1ರ ಒಳಗೆ ನಗರದ ಎಲ್ಲ ಗುಂಡಿಗಳನ್ನು ದುರಸ್ತಿಗೊಳಿಸುವಂತೆ ಅವರು ಇದೇ ವೇಳೆ ಅಧಿಕಾರಿಗಳಿಗೆ ಗಡುವು ನೀಡಿದ್ರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸ್ಮಾರ್ಟ್ ಸಿಟಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಅನುದಾನದ ನೀಡಿದ್ದರೂ, ಕಾಮಗಾರಿಯಲ್ಲಿ ವಿಳಂಬ ನೀತಿ ಯಾಕೆ? ಜನರು ನಮ್ಮನ್ನು ಪ್ರಶ್ನಿಸಿದರೆ ಏನು ಉತ್ತರ ನೀಡಬೇಕು? ಎಂದು ಪಾಲಿಕೆ ಆಯುಕ್ತ ಚಿದಾನಂದ ಹಾಗೂ ಪಿಡಬ್ಲೂಡಿ ಎಂಜಿನಿಯರ್ ಹಾಗೂ ಅಧಿಕಾರಿಗಳನ್ನು ಪ್ರಶ್ನಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ, ಉಪ ಮೇಯರ್ ಚನ್ನಬಸಪ್ಪ ಹಾಗೂ ಪಾಲಿಕೆ ವಿರೋಧ ಪಕ್ಷದ ನಾಯಕ ರಮೇಶ್ ಹೆಗಡೆ ಸೇರಿ ಇತರರು ಹಾಜರಿದ್ದರು.
ಬಳಿಕ ಸಚಿವ ಈಶ್ವರಪ್ಪ, ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ, ರಸ್ತೆ ಸೇರಿದಂತೆ ಇತರ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಿದರು. ಇದೇ ವೇಳೆ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.