ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಕುಟುಂಬ ಸಮೇತರಾಗಿ ಆಗಮಿಸಿ ತುಂಗಾ ನದಿಗೆ ಬಾಗಿನ ಅರ್ಪಿಸಿದರು.
ಶಿವಮೊಗ್ಗದ ಕೊರ್ಪಲಯ್ಯನ ಛತ್ರದ ಸಮೀಪವಿರುವ ಶಿವಪ್ಪನಾಯಕ ಮಂಟಪದ ಬಳಿ ತಮ್ಮ ಧರ್ಮಪತ್ನಿ ಜಯಲಕ್ಷ್ಮಿ ಜತೆ ಬಂದು ನದಿಗೆ ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಸಮರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಈ ಬಾರಿಯ ಸುರಿದ ಮಳೆ ರೈತರ ಮುಖದಲ್ಲಿ ಮಂದಹಾಸ ತಂದಿದೆ. ಕಳೆದ ಬಾರಿ ನಿರೀಕ್ಷೆಗೂ ಮೀರಿ ಪ್ರವಾಹ ಬಂದಾಗ ರಾಜ್ಯ ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿತ್ತು. ಪ್ರವಾಹದಿಂದ ಹಾನಿಗೊಳಗಾದ ಸೇತುವೆ ಹಾಗೂ ರಸ್ತೆಗಳ ನಿರ್ಮಾಣಕ್ಕೆ ಸಾಕಷ್ಟು ಅನುದಾನವನ್ನು ನೀಡಲಾಗಿತ್ತು. ರಸ್ತೆ ನಿರ್ಮಾಣಕ್ಕೆ ಗ್ರಾಮೀಣಾಭಿವೃದ್ದಿ ಇಲಾಖೆಯಿಂದಲೇ 1,500 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಈ ಕಾಮಗಾರಿಗಳನ್ನು ಭರದಿಂದ ನಡೆಸಲಾಗುತ್ತಿದೆ ಎಂದರು.
ಬಳಿಕ ಇಲ್ಲಿನ ಗಾಯತ್ರಿ ದೇವಾಲಯಕ್ಕೂ ತೆರಳಿದ ಸಚಿವರು ಪೂಜೆ ಸಲ್ಲಿಸಿದರು. ಈ ವೇಳೆ ಈಶ್ವರಪ್ಪನವರ ಸೊಸೆ ಶಾಲಿನಿ ಮೊಮ್ಮಗ ವಿವನ್, ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರುಳೀಧರ್ ಸೇರಿದಂತೆ ಇತರರು ಹಾಜರಿದ್ದರು.