ಶಿವಮೊಗ್ಗ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಶಿವಮೊಗ್ಗದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು. ಈ ಜನ್ಮದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲ್ಲ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಸಿದ್ದರಾಮಯ್ಯ ಬಾದಾಮಿಯಲ್ಲಿ ಹೇಳಿಕೆ ನೀಡಿರುವುದನ್ನು ನಾನು ಕೇಳಿದ್ದೇನೆ. ಭಾರತೀಯ ಜನತಾ ಪಾರ್ಟಿ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಶೇ. 60ರಷ್ಟು ಗೆದ್ದಿದೆ. ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಗೆಲ್ಲುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಂಘಟನೆಯ ಶಕ್ತಿಯ ಮೇಲೆ ಜನರ ಆಶೀರ್ವಾದದಿಂದ ಪಕ್ಷವನ್ನು ಅಧಿಕಾರಕ್ಕೆ ತರುವ ದಿಕ್ಕಿನಲ್ಲಿ ಪ್ರಯತ್ನ ನಡೆಸುತ್ತಿದ್ದೇವೆ ಎಂದರು.
ಆದರೆ ಸಿದ್ದರಾಮಯ್ಯನವರು ಘೋಷಣೆ ಮಾಡಿಕೊಂಡಿದ್ದಾರೆ. ಮುಂದಿನ ಸಲ ನಮ್ಮದೇ ಸರ್ಕಾರ ಆಡಳಿತಕ್ಕೆ ಬರುತ್ತದೆ. ನಾನೇ ಮುಖ್ಯಮಂತ್ರಿ ಎಂದು. ಇಂತಹ ಸರ್ವಾಧಿಕಾರಿ ಧೋರಣೆಯಿಂದಾಗಿಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿರ್ನಾಮವಾಗಿದೆ. ರಾಜ್ಯದ ಜನ ಇವರನ್ನು ಹಿಂದಿನ ಚುನಾವಣೆಯಲ್ಲಿ ಸೋಲಿಸಿದ್ದಾರೆ. ಉಪಚುನಾವಣೆಯಲ್ಲಿ ಸೋಲಿಸಿದ್ದಾರೆ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲೂ ಸಹ ಸೋಲಿಸಿದ್ದಾರೆ. ಆದರೂ ಕಾಂಗ್ರೆಸ್ನವರಿಗೆ ಇನ್ನೂ ಬುದ್ಧಿ ಬಂದಿಲ್ಲ ಎಂದರು.
ಓದಿ: ಉಜ್ಜಯಿನಿ ಪೀಠಕ್ಕೆ ಈಶ್ವರಪ್ಪ ಭೇಟಿ: ಶ್ರೀಗಳಿಂದ ಆಶೀರ್ವಾದ
ಇನ್ನು ವಿಧಾನ ಪರಿಷತ್ ವಿಸರ್ಜನೆ ಕುರಿತು ಮಾತನಾಡಿದ ಅವರು, ವಿಧಾನ ಪರಿಷತ್ ಹಿರಿಯರ ಮನೆ. ವಿಧಾನಸಭೆಗೆ ಮಾರ್ಗದರ್ಶನ ನೀಡುತ್ತಾ 115 ವರ್ಷಗಳಿಂದ ಒಳ್ಳೆಯ ಹೆಸರು ಇದೆ. ಆದರೆ ಮೊನ್ನೆ ನಡೆದ ಘಟನೆ ರಾಜ್ಯಕ್ಕೆ ಕಳಂಕವಾಗಿದೆ. ಈ ಒಂದು ಘಟನೆಯಿಂದಾಗಿ ವಿಧಾನ ಪರಿಷತ್ ವಿಸರ್ಜನೆ ಮಾಡಬೇಕು ಎನ್ನುವುದು ಸೂಕ್ತ ಅಲ್ಲ ಎಂದರು. ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ನಾಯಕರು, ಮುಖ್ಯಮಂತ್ರಿಗಳು ಯಾವತ್ತು ತೀರ್ಮಾನ ತೆಗೆದುಕೊಳ್ಳುತ್ತಾರೆಯೋ ಅವತ್ತು ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದರು.