ಶಿವಮೊಗ್ಗ: ಕೊರೊನಾ ವೈರಸ್ ಪ್ರಪಂಚಕ್ಕೆ ಹಬ್ಬಿಸಿದ್ದು ಚೀನಾ ಅಂತ ಜಗತ್ತಿಗೆ ತಿಳಿದಿದೆ. ಆದರೆ, ಈ ಬಗ್ಗೆ ಕಾಂಗ್ರೆಸ್ನವರು ಚಕಾರ ಎತ್ತದೆ ಇರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರ ಹೆಣ ಮತ್ತು ಔಷಧಗಳಲ್ಲಿ ಹಣ ಲೂಟಿ ಹೊಡೆಯುತ್ತಿದೆ ಹಾಗೂ ದೇಶದಲ್ಲಿ ಬಿಜೆಪಿ ಕೊರೊನಾ ಹಬ್ಬಿಸುತ್ತಿದೆ ಎಂಬ ಡಿಕೆಶಿ ಆರೋಪಕ್ಕೆ ಪ್ರತಿಕ್ರಿಯಿಸಿದ ಡಾ.ಸುಧಾಕರ್, ಅವರೊಬ್ಬ ರಾಷ್ಟ್ರೀಯ ಪಕ್ಷದಲ್ಲಿ ಇದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಇಂತಹ ವ್ಯಾಖ್ಯಾನಗಳಿಗೆ ನಾನು ಏನು ಹೇಳಲಿ ಎಂದು ಬೇಸರ ವ್ಯಕ್ತಪಡಿಸಿದರು.
ಒಬ್ಬ ಭಾರತೀಯ, ಜವಾಬ್ದಾರಿಯುತ ಪಕ್ಷದ ನಾಯಕ, ಚೀನಾ ಬಗ್ಗೆ ಮಾತನಾಡದೇ ಈ ರೀತಿ ಆರೋಪ ಮಾಡುವುದು ಎಷ್ಟು ಸರಿ. ಇಡೀ ವಿಶ್ವಕ್ಕೆ ಕೊರೊನಾ ಸೋಂಕು ಹರಡಿದ್ದು, ಚೀನಾದ ವುಹಾನ್ ನಗರದಿಂದ ಎಂದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಕಾಂಗ್ರೆಸ್ನ ಯಾವೊಬ್ಬ ನಾಯಕನೂ ಚಕಾರವೆತ್ತಿಲ್ಲ ಏಕೆ? ಇದಕ್ಕಿಂತ ದುರಂತ ಮತ್ತಿನ್ನೇನಿದೆ. ಇಂತಹ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದರು.
ಹಾವೇರಿ ಮತ್ತು ಶಿವಮೊಗ್ಗಕ್ಕೆ ಸಮಿತಿ:
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ, ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಂತೆ ಶಿವಮೊಗ್ಗದಲ್ಲಿಯೂ ಡೆತ್ ಆಡಿಟ್ ಮಾಡಲಾಗುತ್ತಿದೆ. ಹಾವೇರಿ ಮತ್ತು ಶಿವಮೊಗ್ಗಕ್ಕೆ ಸಮಿತಿ ಕಳುಹಿಸಿಕೊಡಲಾಗುತ್ತಿದೆ. ಆ ಸಮಿತಿ ನಮಗೆ ಎರಡನೇ ಅಲೆಯಲ್ಲಿ ಶಿವಮೊಗ್ಗದಲ್ಲಿ ಹೆಚ್ಚು ಸಾವಾಗಲು ಕಾರಣ ಏನು ಎಂದು ವರದಿ ನೀಡಲಿದೆ ಎಂದರು.
ಬೆಂಗಳೂರಿನಿಂದ ವಿಶೇಷ ತಂಡ:
ಶಿವಮೊಗ್ಗ ಜಿಲ್ಲೆಯಲ್ಲಿ ಎರಡನೇ ಅಲೆಗೆ ಹೆಚ್ಚು ಸಾವು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ವಿಶೇಷ ತಂಡ ಆಗಮಿಸಿ ಪರಿಶೀಲನೆ ನಡೆಸಲಿದೆ. ವಿಶೇಷ ತಂಡ ವರದಿ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಜಿಯೋ-ಫೆನ್ಸಿಂಗ್ ಅಳವಡಿಕೆ:
ಬಯೋ ಮೆಟ್ರಿಕ್ ಹಾಜರಿ ಬಳಿಕ ವೈದ್ಯರು ಕರ್ತವ್ಯ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಂತಹ ವೈದ್ಯರ ವಿರುದ್ಧ ಕ್ರಮಕ್ಕಾಗಿ ಜಿಯೋ ಫೆನ್ಸಿಂಗ್ ಮಾಡಲಾಗುವುದು. ಇಡೀ ರಾಜ್ಯದಲ್ಲಿ ಹೊಸ ವ್ಯವಸ್ಥೆ ತರುವುದಕ್ಕೆ ಆದೇಶ ಮಾಡಿರುವೆ. ಎಲ್ಲಾ ಜಿಲ್ಲಾಸ್ಪತ್ರೆಗಳ ಐಸಿಯು ಮತ್ತು ವಾರ್ಡ್ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲು ಆದೇಶ ನೀಡಲಾಗಿದೆ ಎಂದರು.
ಯಾರು, ಯಾಕೆ ದೆಹಲಿಗೆ ಹೋದರೆಂದು ನನಗೆ ತಿಳಿದಿಲ್ಲ:
ಬಿಜೆಪಿ ಶಾಸಕ ಬೆಲ್ಲದ ದೆಹಲಿಗೆ ತೆರಳಿರುವ ವಿಚಾರದ ಬಗ್ಗೆ ನನಗೇನು ಗೊತ್ತಿಲ್ಲ. ನಾನು ಮತ್ತು ಸಿಎಂ ಹಾಸನ ಪ್ರಗತಿ ಪರಿಶೀಲನೆ ಮುಗಿಸಿ, ನಾನು ಚಿಕ್ಕಮಗಳೂರು ಮುಗಿಸಿ ಇಂದು ಶಿವಮೊಗ್ಗಕ್ಕೆ ಬಂದಿದ್ದೇನೆ ಎಂದರು.
ಓದಿ: ಶಿವಮೊಗ್ಗದಲ್ಲಿ ಹೆಚ್ಚುತ್ತಿರುವ ಸೋಂಕಿತರ ಸಾವಿನ ಪ್ರಮಾಣ: ವಿಶೇಷ ಸಮಿತಿ ರಚನೆಗೆ ಸುಧಾಕರ್ ಸೂಚನೆ