ಶಿವಮೊಗ್ಗ: 'ನಾನು ಹಿಂದೆ ಜೈಲಿನಲ್ಲಿ ಬಂಧಿಯಾಗಿದ್ದೆ. ಪೊಲೀಸ್ನವರು ನನಗೆ ಬಹಳ ಉಪದ್ರವ ಕೊಟ್ಟಿದ್ದರು. ಇಲ್ಲಿಯೇ ಪಕ್ಕದ ಪೊಲೀಸ್ ಠಾಣೆಯಲ್ಲಿ ಸೊಳ್ಳೆ ಕಚ್ಚಿಸಿಕೊಂಡು, ಅವರು ನೀಡಿದ್ದ ಬ್ಲ್ಯಾಂಕೆಟ್ ಹೊದ್ದು ಮಲಗಿದ್ದೆ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಾವು ಬಂಧನವಾಗಿದ್ದ ಸಂದರ್ಭವನ್ನು ಮೆಲುಕು ಹಾಕಿದರು. ಇದೇ ಸಂದರ್ಭದಲ್ಲಿ ವಿಐಪಿ ಕೈದಿಗಳಿಗೆ ಹೈಟೆಕ್ ಜೈಲು ನಿರ್ಮಾಣದ ಬಗ್ಗೆ ತಿಳಿಸಿದರು.
ಶಿವಮೊಗ್ಗದ ಕೋಟೆ ಪೊಲೀಸ್ ಠಾಣಾ ಪಕ್ಕದಲ್ಲಿ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಾ, 'ರೌಡಿಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಪೊಲೀಸರು ಸಶಕ್ತರಾಗಿದ್ದಾರೆ. ನಮ್ಮ ರಾಜ್ಯದಲ್ಲಿ ಮರ್ಯಾದಸ್ಥರು ತಲೆ ಎತ್ತಿ ಓಡಾಡುವಂತಾಗಬೇಕು. ರೌಡಿಗಳು ತಲೆ ತಗ್ಗಿಸಿ ನಡೆಯುವಂತಾಗಬೇಕು. ಅಂತಹ ಕಾನೂನನ್ನು ಜಾರಿಗೆ ತರುತ್ತೇವೆ' ಎಂದರು.
'ನಾನು ಐದು ವರ್ಷದ ಮಂತ್ರಿಯಲ್ಲ. ಕೇವಲ ಒಂದೂವರೆ ವರ್ಷಕ್ಕೆ ಗೃಹಮಂತ್ರಿಯಾಗಿದ್ದೇನೆ. ಈ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಗೆ ಸಾಕಷ್ಟು ಅನುದಾನವನ್ನು ನೀಡಿದ ತೃಪ್ತಿ ನನ್ನಲ್ಲಿದೆ. ಇನ್ನೂ ಜಿಲ್ಲೆಯಲ್ಲಿ ನೂತನ ಹೈಟೆಕ್ ಜೈಲನ್ನು ನಿರ್ಮಾಣ ಮಾಡಲಿದ್ದೇವೆ. ವಿಐಪಿಗಳು ಆರೋಪಿಯಾದರೆ ಅವರನ್ನು ಬಂಧಿಸಿ ಜೈಲಿನಲ್ಲಿಡಲು 108 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಜೈಲು ಕಟ್ಟಲು ಕೇಂದ್ರ ಸರ್ಕಾರದಿಂದ ಅನುಮತಿ ದೊರೆತಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಇಂತಹ ಜೈಲು ಸ್ಥಾಪನೆಯಾಗಲಿದ್ದು ಅದನ್ನು ಶಿವಮೊಗ್ಗದಲ್ಲಿ ನಿರ್ಮಿಸಲು ಯೋಜಿಸಲಾಗಿದೆ' ಎಂದು ಹೇಳಿದರು.
ಇದನ್ನೂ ಓದಿ: 2022ರಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಬೆಂಗಳೂರಲ್ಲಿ ಇಳಿಮುಖ: ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ
ಇದಕ್ಕೂ ಮುನ್ನ ಮಾತನಾಡಿದ ಎಂಎಲ್ಸಿ ಆಯನೂರು ಮಂಜುನಾಥ್, 'ಹೊಸ ಠಾಣೆಯನ್ನು ನೀಡಿದ್ದೀರಿ. ಆದರೆ ಫರ್ನಿಚರ್ ನೀಡಿಲ್ಲ. ಹೊಸ ರೇಷ್ಮೆ ಸೀರೆ ಕೊಟ್ಟು ಹಳೆ ರವಿಕೆ ಹಾಕಿಕೊಂಡು ಬರಲು ಹೇಳಿದಂತಾಗಿದೆ. ದಯವಿಟ್ಟು ಈ ಠಾಣೆಗೆ ಪೀಠೋಪಕರಣಗಳನ್ನು ನೀಡಬೇಕು. ಹಳೆಯ ಫರ್ನಿಚರ್ಗೆ ಮುಕ್ತಿ ನೀಡಬೇಕು' ಎಂದು ಮನವಿ ಮಾಡಿದರು. ಅಲ್ಲದೇ 'ಗೃಹಮಂತ್ರಿಯಾದ ತಾವು ಇಲ್ಲಿಗೆ ಬರುತ್ತಿದ್ದೀರಾ ಎಂಬುದು ತಿಳಿದಿದ್ದರೆ ಎಲ್ಲಾ ಶಾಸಕರು ಹಾಜರಾಗುತ್ತಿದ್ದೆವು. ನಾವು ನಾಲ್ಕೈದು ಶಾಸಕರು ಶಿವಮೊಗ್ಗದಲ್ಲೇ ಇದ್ದೇವೆ. ಬೇರೆ ಕಡೆಯ ಶಾಸಕರು ಬಂದಿದ್ದರೆ ನಿಮ್ಮ ಗೌರವ ಮತ್ತಷ್ಟು ಹೆಚ್ಚುತ್ತಿತ್ತು. ಆದರೆ ಕೊನೆ ಘಳಿಗೆಯಲ್ಲಿ ನಮ್ಮನ್ನು ಆಹ್ವಾನಿಸಿದ್ದೀರಿ. ನಿಮಗೆ ಅಕ್ಕಪಕ್ಕ ಪೊಲೀಸರಿದ್ದರೆ ಸಾಕೇನೋ ನಮ್ಮ ಅಗತ್ಯವಿಲ್ಲ ಎಂದೆನಿಸುತ್ತದೆ' ಎಂದು ಸಚಿವರ ಕಾಲೆಳೆದರು.
ಪೊಲೀಸ್ ಇಲಾಖೆಯ ಕಾರ್ಯವೈಖರಿಗೆ ಮೆಚ್ಚುಗೆ: 2022ರಲ್ಲಿ ಪೊಲೀಸ್ ಇಲಾಖೆಯ ಕಾರ್ಯವೈಖರಿ ತೃಪ್ತಿ ತಂದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿ ಹೇಳಿದರು. ಪೊಲೀಸ್ ಸಿಬ್ಬಂದಿ ಹಗಲಿರುಳು ಶ್ರಮಿಸಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಸರಕಾರಕ್ಕೂ ಒಳ್ಳೆಯ ಹೆಸರು ಬಂದಿದೆ. ಕಳೆದ ಒಂದು ವರ್ಷದಲ್ಲಿ, ಗೃಹ ಇಲಾಖೆಯ ಕಾರ್ಯದಕ್ಷತೆ ಹೆಚ್ಚಿಸಲು ಸರಕಾರವೂ ಆದ್ಯತೆ ನೀಡಿದೆ. ಒಂದು ಲಕ್ಷ ಸಿಬ್ಬಂದಿ ಹೊಂದಿದ ಗೃಹ ಇಲಾಖೆ ಎಲ್ಲಾ ಸವಾಲುಗಳನ್ನೂ ಯಶಸ್ವಿಯಾಗಿ ನಿಭಾಯಿಸಿದೆ. ನೇಮಕಾತಿ ಹಗರಣವನ್ನು ಬಯಲುಗೊಳಿಸಿ, ಇಲಾಖೆಗೆ ಭ್ರಷ್ಟ ಅಧಿಕಾರಿಗಳ ಸೇರ್ಪಡೆಗೆ ತಡೆಯೊಡ್ಡಿದಂತಹ ಘಟನೆಯೂ ನಡೆದಿದೆ. ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ ಒಳಗೊಂಡಂತೆ ಸಾಕಷ್ಟು ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ ಎಂದು ಪೊಲೀಸರನ್ನು ಸಚಿವರು ಪ್ರಶಂಸಿಸಿದ್ದಾರೆ.
ಹೈಟೆಕ್ ಜೈಲು ನಿರ್ಮಾಣದ ಉದ್ದೇಶ: 108 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಜೈಲು ನಿರ್ಮಾಣವಾಗಲಿದೆ. ಹಾಲಿ ರಾಜ್ಯದಲ್ಲಿ ಆರು ಕೇಂದ್ರ ಕಾರಾಗೃಹಗಳಿವೆ. ಇವುಗಳಿಗೆ ಹೊರತಾಗಿ ಹೈಟೆಕ್ ಜೈಲು ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಹಲವಾರು ಅಪರಾಧ ಮಾಡಿರುವವರಿಗೆ ಹಾಲಿ ಜೈಲ್ನಲ್ಲಿ ಇಡಲಾಗುತ್ತಿದೆ. ಇದರಲ್ಲಿ ಎಸಿ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಅಪರಾಧ ಪ್ರಕರಣದ ಖೈದಿಗಳಾಗಿರುವ ವಿಐಪಿ, ವಿವಿಐಪಿಗಳನ್ನು ಈ ಜೈಲಿಗೆ ಕರೆತರಲಾಗುತ್ತದೆ. ನೂರಾರು ಕೋಟಿ ಅವ್ಯವಹಾರ ನಡೆಸಿದವರು ಸೇರಿದಂತೆ ಉಗ್ರವಾದಿಗಳನ್ನು ಇಲ್ಲಿ ಇಡಲು ತೀರ್ಮಾನ ಮಾಡಲಾಗಿದೆ. ಇದೆಲ್ಲದರ ಜೊತೆಗೆ ವಿಐಪಿ, ವಿವಿಐಪಿ ಸೇರಿದಂತೆ ಇತರೆ ಗಣ್ಯ ವ್ಯಕ್ತಿಗಳ ಸುರಕ್ಷತೆಯ ದೃಷ್ಟಿಯಿಂದ ಹೈಟೆಕ್ ಜೈಲು ನಿರ್ಮಾಣ ಮಾಡಲಾಗುತ್ತಿದೆ. ಸಾಮಾನ್ಯ ಜೈಲಿನಲ್ಲಿದ್ದರೆ, ಅವರ ಜೀವಕ್ಕೆ ಅಪಾಯವಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಇಂತಹ ಜೈಲುಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಇನ್ನು ಹೈಟೆಕ್ ಜೈಲಿನ ರೂಪುರೇಷೆಯ ಬಗ್ಗೆ ಗೃಹ ಇಲಾಖೆಯು ಇನ್ನೂ ಯಾವುದೇ ಮಾಹಿತಿಯನ್ನು ಹೊರ ಹಾಕಿಲ್ಲ. ಆದರೂ ಸಹ ಗೃಹ ಸಚಿವರಾದ ಆಗರ ಜ್ಞಾನೇಂದ್ರ ಅವರು ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಹೈಟೆಕ್ ಜೈಲು ನಿರ್ಮಾಣ ಮಾಡುವ ಮಾಹಿತಿ ಹಂಚಿಕೊಂಡಿದ್ದಾರೆ. ಇದರಲ್ಲಿ ವಿವಿಐಪಿ ಸೇರಿದಂತೆ ಸಮಾಜದ ಗಣ್ಯ ವ್ಯಕ್ತಿಗಳನ್ನು ಮಾತ್ರ ಬಂಧಿಸಲು ಅವಕಾಶ ಇರಲಿದೆ.
ಹಾಲಿ ಶಿವಮೊಗ್ಗದ ಕೇಂದ್ರ ಕಾರಾಗೃಹ ರಾಜ್ಯಕ್ಕೆ ಮಾದರಿಯಾದ ಕಾರಾಗೃಹವಾಗಿದೆ. ಇದನ್ನು ಕೊರಿಯಾ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಖೈದಿಗಳಿಗೆ ಟಿವಿ, ಫ್ಯಾನ್ ಒದಗಿಸಲಾಗಿದೆ. ಇಲ್ಲಿನ ಬ್ಯಾರಕ್ಗಳು ಚೆನ್ನಾಗಿವೆ. ಖೈದಿಗಳಿಗೆ ಗಾಳಿ, ಬೆಳಕು ಚೆನ್ನಾಗಿ ಬರುವಂತೆ ಮಾಡಲಾಗಿದೆ. ಊಟ, ತಿಂಡಿ ತಯಾರಿಕೆಗೆ ವಿಶಾಲವಾದ ರೂಮ್ ಇದೆ. ಇಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ. ಹೈಟೆಕ್ ಜೈಲು ಇದಕ್ಕಿಂತ ಚೆನ್ನಾಗಿ ಇರಲಿದೆ ಎಂಬ ಮಾತುಗಳು ಕೇಳಿಬಂದಿದೆ.
ಇದನ್ನೂ ಓದಿ: ಮತ್ತೆ ಇಬ್ಬರು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ