ಶಿವಮೊಗ್ಗ: ಜಿಲ್ಲೆಯಾದ್ಯಂತ ಭಾರಿ ಮಳೆ ಹಿನ್ನೆಲೆ ಶಾಸಕರಾದ ಎಸ್.ಕುಮಾರ್ ಬಂಗಾರಪ್ಪನವರ ಅಧ್ಯಕ್ಷತೆಯಲ್ಲಿ ಸಾಗರ ತಾಲೂಕಿನ ತಾಳಗುಪ್ಪ ಸಾರ್ವಜನಿಕ ಆಸ್ಪತ್ರೆ ಪ್ರಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.
ವಿವಿಧ ಇಲಾಖೆಯ ಅಧಿಕಾರಿಗಳಿಗೆ ಶಾಸಕರಿಂದ ಸೂಚನೆಗಳು:
- ತಾಳಗುಪ್ಪ ಹೋಬಳಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಾಗಿದ್ದು, ಸುಮಾರು ಸಾವಿರಾರು ಎಕರೆ ಜಮೀನು ಜಲಾವೃತಗೊಂಡಿದೆ. ಇದರಿಂದ ಭತ್ತದ ಮಡಿಗಳು ಹಾಳಾಗಿವೆ. ಈ ಭಾಗದ ರೈತರ ಬೇಡಿಕೆಯಾದ 1010 ಭತ್ತದ ಬೀಜವನ್ನು ಶೀಘ್ರದಲ್ಲಿ ರೈತರಿಗೆ ಪೂರೈಕೆ ಮಾಡಿ, ಅನಿವಾರ್ಯತೆ ಇದ್ದರೆ ಬೇರೆ ತಳಿಗಳ ಭತ್ತದ ಬೀಜವನ್ನು ಪೂರೈಸಿ ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
- ಜವುಳು ಪ್ರದೇಶಗಳಲ್ಲಿ ಅಡಕೆ ಕೊಳೆ ರೋಗ ತಗಲುವ ಸಾಧ್ಯತೆಗಳಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಕೊಳೆ ಬರುವ ಪ್ರದೇಶಗಳನ್ನು ಗುರುತಿಸಿ ವರದಿಯನ್ನು ನೀಡಬೇಕೆಂದು ತೊಟಾಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
- ನೆರೆಹಾವಳಿ ಪ್ರದೇಶದಲ್ಲಿ ಜಾನುವಾರು ಕೊಟ್ಪಿಗೆಗಳಿಗೆ ನೀರು ನುಗ್ಗಿದ್ದು, ಅಂತಹ ಜಾನುವಾರುಗಳನ್ನ ಆಯಾ ಗ್ರಾಮದ ಶಾಲಾ ಪ್ರಾಂಗಣದಲ್ಲಿ ಸ್ಥಳಾಂತರ ಮಾಡಲು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
- ಮಳೆ-ಗಾಳಿ ಹೆಚ್ಚಾದ ಸಂದರ್ಭದಲ್ಲಿ ರಸ್ತೆಗಳಲ್ಲಿ ಗುಂಡಿಗಳು ಜಾಸ್ತಿ ಆಗಿದೆ ಹಾಗೂ ರಸ್ತೆಯಲ್ಲಿ ಮರಗಳೂ ಹೆಚ್ಚಾಗಿ ಬೀಳುವುದರಿಂದ ಸಾರ್ವಜನಿಕರಿಗೆ ಓಡಾಡಲು ತುಂಬಾ ತೊಂದರೆಯಾಗುತ್ತಿದೆ. ಇದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಂಬಂಧ ಪಟ್ಟ ಲೋಕೊಪಯೋಗಿ ಹಾಗೂ ಪಂಚಾಯತ್ ರಾಜ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಿದರು.
- ಚಿಕ್ಕ ಮಕ್ಕಳ ಹಿತದೃಷ್ಟಿಯಿಂದ ಹಳೆ ಅಂಗನವಾಡಿಗಳು ಮಳೆಹಾನಿಯಿಂದ ಶಿಥಿಲಾವಸ್ಥೆಯಾಗಿದ್ದು, ಅಂದಾಜು ಮೊತ್ತದ ವರದಿಯನ್ನು ನೀಡಬೇಕೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೂಚಿಸಿದರು.
- ಮಳೆಯಿಂದ ಹಾನಿಗೊಳಗಾದ ಶಾಲಾ ಕಟ್ಟಡಗಳು, ಅಂಗನವಾಡಿ ಕಟ್ಟಡಗಳು, ರಸ್ತೆಗಳು, ಮನೆಗಳು, ಹಾಸ್ಟೆಲ್‌ಗಳು ಹಾಗೂ ಇನ್ನಿತರ ಯಾವುದೇ ಕಟ್ಟಡಗಳ ವರದಿಯನ್ನು ಸಲ್ಲಿಸಲು ಸಾಗರ ತಾಲೂಕು ಮಟ್ಟದ ಸಂಬಂಧ ಪಟ್ಟ ಅಧಿಕಾರಿಗಳಿಗೆ ಖಡಕ್ ಆಗಿ ಸೂಚಿಸಿದರು.
- ತಡಗಳಲೆ-ಬೀಸಿನಗದ್ದೆ ರಸ್ತೆ ಮಳೆ ಹಾನಿಯಿಂದ ಹಾಳಾಗಿರುವ ಕುರಿತು ವರದಿ ಹಾಗೂ ಮಾಸೂರು-ಕಾಗೊಡು-ಕಾನ್ಲೆ ರಸ್ತೆ ಕಾಮಗಾರಿ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಎಲ್ಲಾ ಇಲಾಖೆಗಳು ತಮ್ಮ ತಮ್ಮ ಇಲಾಖೆಗಳ ಹಾಗೂ ಸಾರ್ವಜನಿಕರ ಖಾಸಗಿ ಆಸ್ತಿಯ ಹಾನಿಯ ಅಂದಾಜು ಮೊತ್ತದೊಂದಿಗೆ ವರದಿಯನ್ನು ಸಲ್ಲಿಸಲು ಖಡಕ್ ಆಗಿ ಸೂಚಿಸಿದರು. ಈ ಸಂದರ್ಭದಲ್ಲಿ ಸಾಗರ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಜರಿದ್ದರು.