ಶಿವಮೊಗ್ಗ: ಸಾಮಾನ್ಯ ಬೆಂಬಲ ಬೆಲೆ ಯೋಜನೆಯಲ್ಲಿ ರೈತರಿಂದ ಖರೀದಿಸಿರುವ ಭತ್ತವನ್ನ ನಿಗದಿತ ಅವಧಿಯ ಒಳಗಾಗಿ ಹಲ್ಲಿಂಗ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಕ್ಕಿ ಗಿರಣಿ ಮಾಲೀಕರಿಗೆ ಸೂಚನೆ ನೀಡಿದ್ದಾರೆ.
ಅಕ್ಕಿ ಗಿರಣಿ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದ ಅವರು, ಪ್ರಸ್ತುತ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಲ್ಲಿ ಸಾಮಾನ್ಯ ಭತ್ತ ಪ್ರತಿ ಕ್ವಿಂಟಲ್‍ಗೆ 1815 ರೂ. ನಿಗದಿಪಡಿಸಲಾಗಿದ್ದು, ಜಿಲ್ಲೆಯಲ್ಲಿ ನೋಂದಾಯಿಸಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಗರಿಷ್ಟ 40 ಕ್ವಿಂಟಲ್ ಭತ್ತ ಖರೀದಿಸಲಾಗುತ್ತಿದೆ. ಕೃಷಿ ಇಲಾಖೆಯ ದತ್ತಾಂಶದಿಂದ ರೈತರ ಗುರುತಿನ ಸಂಖ್ಯೆಯನ್ನು ಪಡೆದು ಖರೀದಿ ಕೇಂದ್ರದಲ್ಲಿ ರೈತರ ನೋಂದಣಿ ಮಾಡಲಾಗುತ್ತಿದೆ. ಅಕ್ಕಿ ಗಿರಣಿ ಮಾಲೀಕರು ಇಳುವರಿ ಇತ್ಯಾದಿ ಸಬೂಬು ಹೇಳದೆ,ಸರ್ಕಾರದ ಮಾರ್ಗಸೂಚಿ ಪ್ರಕಾರ ಹಲ್ಲಿಂಗ್ ಕಾರ್ಯ ಮಾಡಬೇಕು ಎಂದರು.
ಗಿರಣಿ ಮಾಲೀಕರ ಅಹವಾಲು:
ರೈತರಿಂದ ಖರೀದಿಸಿದ ಭತ್ತವನ್ನು ಹಲ್ಲಿಂಗ್ ಮಾಡಿ, ಕ್ವಿಂಟಲ್‍ಗೆ 67 ಕೆ.ಜಿ. ಅಕ್ಕಿಯನ್ನು ನೀಡಬೇಕೆಂದು ಸರ್ಕಾರದ ಮಾರ್ಗಸೂಚಿಯಿದೆ. ಆದರೆ, ಜಿಲ್ಲೆಯಲ್ಲಿ ಈ ಬಾರಿಯ ಭತ್ತದ ಗುಣಮಟ್ಟ ಕಡಿಮೆಯಾಗಿದ್ದು,ಅಷ್ಟು ಇಳುವರಿ ಸಿಗುವುದು ಸಾಧ್ಯವಿಲ್ಲ. ಇದರಿಂದ ತಮಗೆ ನಷ್ಟ ಉಂಟಾಗುತ್ತಿರುವುದಾಗಿ ಅಕ್ಕಿ ಗಿರಣಿ ಮಾಲೀಕರು ಅಹವಾಲು ಮಂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಇಳುವರಿಯನ್ನು ವೈಜ್ಞಾನಿಕವಾಗಿ ಪರೀಕ್ಷಿಸಲು ಸ್ಯಾಂಪಲ್ ಹಲ್ಲಿಂಗ್ ಮಾಡಲಾಗುವುದು. ಅಕ್ಕಿ ಗಿರಣಿ ಮಾಲೀಕರ ಅಹವಾಲಿನಂತೆ ಇಳುವರಿ ಕಡಿಮೆ ಕಂಡು ಬಂದಲ್ಲಿ ಈ ಕುರಿತು ಸೂಕ್ತ ಕ್ರಮಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಇದುವರೆಗೆ 167 ರೈತರು ಮಾತ್ರ ಹೆಸರು ನೋಂದಣಿ ಮಾಡಿದ್ದಾರೆ. ಹೊಸನಗರದಲ್ಲಿ 116 ರೈತರು ನೋಂದಣಿ ಮಾಡಿದ್ದು,ಭದ್ರಾವತಿ, ತೀರ್ಥಹಳ್ಳಿ ಮತ್ತು ಶಿವಮೊಗ್ಗ ತಾಲೂಕಿನಲ್ಲಿ ಯಾವುದೇ ರೈತರು ನೋಂದಣಿ ಮಾಡಿಲ್ಲ. ರೈತರು ಭತ್ತವನ್ನು ಪೂರೈಸಿದ ಮೂರು ದಿನಗಳ ಒಳಗಾಗಿ ರೈತರಿಗೆ ಹಣವನ್ನು ಜಿಎಸ್ಟಿ ಮುಖಾಂತರ ಪಾವತಿಸಬೇಕು. ಅಕ್ಕಿ ಗಿರಣಿ ಮಾಲೀಕರು ಆಹಾರ ನಿಗಮದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುವ ಮೂಲಕ ಬ್ಯಾಂಕ್ ಗ್ಯಾರಂಟಿ ಅಥವಾ ಸ್ಥಿರಾಸ್ತಿಯನ್ನು ನೋಂದಣಿ ಮಾಡುವುದರ ಮೂಲಕ ಅಡಮಾನ ಇಡಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ಜಯಪ್ಪ ಅವರು ತಿಳಿಸಿದರು.