ಶಿವಮೊಗ್ಗ: ಕಳೆದೆರಡು ವರ್ಷಗಳಿಂದ ಈಚೆಗೆ ಕೋವಿಡ್ ವಿಶ್ವವನ್ನೇ ಕಾಡುತ್ತಿದೆ. ಈಗಲೂ ಸಹ ಕೋವಿಡ್ ತನ್ನ ಅಬ್ಬರ ಮುಂದುವರಿಸಿದ್ದು, ಆಯಾ ಸರ್ಕಾರಗಳು ಕೋವಿಡ್ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳುತ್ತಿವೆ. ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಕೋವಿಡ್ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ.
ಈ ಕಾರಣಕ್ಕಾಗಿ ವೈದ್ಯಕೀಯ ವ್ಯವಸ್ಥೆಯನ್ನು ಹಂತಹಂತವಾಗಿ ಬಲಗೊಳಿಸುವ ಕೆಲಸವನ್ನ ಸರ್ಕಾರ ಮಾಡುತ್ತಿದೆ. ಈ ನಡುವೆ ಸಂಕಷ್ಟದ ಸಮಯದಲ್ಲಿ ಸರ್ಕಾರ ಹಾಗೂ ಜನರಿಗೆ ನೆರವು ನೀಡುವ ಸಲುವಾಗಿ ಅನಿವಾಸಿ ಭಾರತೀಯರು ಮುಂದೆ ಬಂದಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಶಿವಮೊಗ್ಗ ಮೂಲದ ಕುಟುಂಬಸ್ಥರು ಹಾಗೂ ಮೈಸೂರು ಮೆಡಿಕಲ್ ಕಾಲೇಜಿನ ಹಳೆ ವಿದ್ಯಾರ್ಥಿಗಳು ಹಲವು ಉಪಕರಣಗಳನ್ನು ನೀಡಿದ್ದಾರೆ.
ಪ್ರತಿ ಜಿಲ್ಲೆಯ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ ಸಲಕರಣೆಗಳನ್ನ ನೀಡಿ ಬಲಪಡಿಸಲಾಗುತ್ತಿದೆ. ಸರ್ಕಾರದ ಜೊತೆ ಜೊತೆಗೆ ಸಂಘ, ಸಂಸ್ಥೆಗಳು ಸಹ ಹಿಂದಿನಿಂದಲೂ ಸರ್ಕಾರಕ್ಕೆ ನೆರವು ನೀಡುತ್ತಾ ಬಂದಿದ್ದು, ಜನರ ಬೆಂಬಲಕ್ಕೆ ನಿಲ್ಲುತ್ತಿವೆ.
ಈ ನಡುವೆ ಶಿವಮೊಗ್ಗ ಮೂಲದ ಅನಿವಾಸಿ ಭಾರತೀಯರು ತವರು ಜಿಲ್ಲೆಗೆ ಭರ್ಜರಿ ಕೊಡುಗೆಯನ್ನು ನೀಡಿದ್ದಾರೆ. ಬೆಡ್, ವೆಂಟಿಲೇಟರ್, ಆಕ್ಸಿಜನ್ ಕಾನ್ಸ್ಟ್ರೇಟರ್ಸ್, ಪಿಪಿಇ ಕಿಟ್, ಮಾಸ್ಕ್ ಸೇರಿದಂತೆ ಸುಮಾರು 5 ಕೋಟಿ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದಾರೆ.
ಭೂಪಾಳಂ ಕುಟುಂಬಸ್ಥ ಸಹಾಯಹಸ್ತ
ಶಿವಮೊಗ್ಗದ ಪ್ರತಿಷ್ಠಿತ ಕುಟುಂಬಗಳಲ್ಲಿ ಒಂದಾಗಿರುವ ಭೂಪಾಳಂ ಕುಟುಂಬಸ್ಥರು ಅಮೆರಿಕದಲ್ಲಿ ನೆಲೆಸಿದ್ದು, ತವರು ಜಿಲ್ಲೆಗೆ ಕೋವಿಡ್ ನಿಯಂತ್ರಣಕ್ಕಾಗಿ ಕೊಡುಗೆ ನೀಡಿದ್ದಾರೆ. ಅಮೆರಿಕದ ಶಿಕಾಗೋ, ಲೂಯಿಸ್ವಿಲ್ಲೆಯಲ್ಲಿ ನೆಲೆಸಿರುವ ಡಾ.ನಿರ್ಮಲ, ಡಾ.ರುಕ್ಮಯ್ಯ ಹಾಗೂ ತರೀಕೆರೆ ಮೂಲದ ಡಾ.ಕೃಷ್ಣ ಸಿ. ಮೂರ್ತಿ ಹಾಗೂ ಮೈಸೂರು ಮೆಡಿಕಲ್ ಕಾಲೇಜಿನ ಹಳೆ ವಿದ್ಯಾರ್ಥಿಗಳು ಸೇರಿ ಸುಮಾರು 5 ಕೋಟಿ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರಿಸಿದ್ದಾರೆ.
ಅಮೆರಿಕದಿಂದ ಚೆನ್ನೈಪೋರ್ಟ್ ಮೂಲಕ ಶಿವಮೊಗ್ಗಕ್ಕೆ ತಲುಪಿದ ವೈದ್ಯಕೀಯ ಉಪಕರಣಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸ್ವೀಕರಿಸಿ ಬಳಿಕ ಮೆಗ್ಗಾನ್ ಆಸ್ಪತ್ರೆಗೆ ಹಸ್ತಾಂತರಿಸಿದ್ದಾರೆ.
ಇದನ್ನೂ ಓದಿ: 600 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಲೋಕೋಪಯೋಗಿ ಸಚಿವರಿಂದ ಚಾಲನೆ