ಶಿವಮೊಗ್ಗ : ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 18ಕ್ಕೂ ಹೆಚ್ಚು ರಾಜ ಕಾಲುವೆಗಳ ಸ್ವಚ್ಛತೆ ಮತ್ತು ಕಾಮಗಾರಿಯನ್ನು ಪಾಲಿಕೆ ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರುಳೀಧರ್ ವೀಕ್ಷಣೆ ಮಾಡಿದರು.
ಕಳೆದ ವರ್ಷ ರಾಜ ಕಾಲುವೆಗಳಲ್ಲಿ ತುಂಬಿದ್ದ ಹೂಳಿನಿಂದಾಗಿ ನಗರದ ಅನೇಕ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ನಷ್ಟವಾಗಿತ್ತು. ಹಾಗಾಗಿ ಮಹಾನಗರ ಪಾಲಿಕೆ ಈ ಬಾರಿ ಯಾವುದೇ ಸಮಸ್ಯೆಗಳಾಗಬಾರದು ಎಂದು ಮಳೆಗಾಲ ಆರಂಭವಾಗುತ್ತಿದ್ದಂತೆ ₹71 ಲಕ್ಷ ವೆಚ್ಚದಲ್ಲಿ ಪಾಲಿಕೆ ವ್ಯಾಪ್ತಿಯ 24 ವಾರ್ಡ್‌ಗಳ 18 ರಾಜ ಕಾಲುವೆಗಳ ಹೂಳು ತೆಗೆಯುವ ಕಾಮಗಾರಿಯನ್ನು ಕೈಗೊಂಡಿದೆ. ಹೀಗಾಗಿ ಸದ್ಯ ಕಾಮಗಾರಿ ನಡೆಯುತ್ತಿದ್ದು, ಅಧಿಕಾರಿಗಳೊಂದಿಗೆ ಪಾಲಿಕೆ ಮೇಯರ್, ಉಪ ಮೇಯರ್ ಭೇಟಿ ನೀಡಿ ವೀಕ್ಷಿಸಿದರು.
ಕಳೆದ ಬಾರಿ ಆಗಿರುವ ಅನಾಹುತಗಳು ಈ ಬಾರಿ ಆಗಬಾರದೆಂದು ಅನಾಹುತಕ್ಕೂ ಮುನ್ನವೇ ಮುನ್ನೆಚ್ಚರಿಕಾ ಕ್ರಮವಾಗಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಮೇಯರ್ ಮಾಧ್ಯಮದವರಿಗೆ ಮಾಹಿತಿ ತಿಳಿಸಿದರು.