ಶಿವಮೊಗ್ಗ: ಪೌರ ಕಾರ್ಮಿಕರ ದಿನಾಚರಣೆ ನಿಮಿತ್ತ ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಪೌರ ಕಾರ್ಮಿಕರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಬೆಳ್ಳಿ ದೀಪವನ್ನ ಉಡುಗೊರೆಯಾಗಿ ನೀಡುವ ಮೂಲಕ ಗೌರವಿಸಲಾಯಿತು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲಿಕೆಯಲ್ಲಿನ ಪೌರ ಕಾರ್ಮಿಕರು ಸೇರಿದಂತೆ 717 ಜನರಿಗೆ ಮೇಯರ್, ಉಪಮೇಯರ್ ಹಾಗೂ ಪಾಲಿಕೆ ಸದಸ್ಯರುಗಳು ಬೆಳ್ಳಿ ದೀಪಗಳನ್ನು ನೀಡಿ ಸನ್ಮಾನಿಸಿ ಗೌರವಿಸಿದರು.
ಕಾಲಿಗೆ ಬಿದ್ದು ನಮಸ್ಕರಿಸಿದ ಮೇಯರ್- ಉಪಮೇಯರ್:
ಈ ಬಾರಿ ಎಲ್ಲ ಪೌರಕಾರ್ಮಿಕರಿಗೂ ಬೆಳ್ಳಿ ದೀಪ ಉಡುಗೊರೆಯಾಗಿ ನೀಡಿ ಸನ್ಮಾನಿಸಲಾಗಿದ್ದು, ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರುಳೀಧರ್, ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಹಾಗೂ ವಿರೋಧ ಪಕ್ಷದ ಹೆಚ್.ಸಿ.ಯೋಗೀಶ್ ಪೌರ ಕಾರ್ಮಿಕರಿಗೆ ಮಂಡಿಯೂರಿ ನಮಸ್ಕರಿಸುವ ಮೂಲಕ ಗೌರವ ಸಮರ್ಪಿಸಿದರು.
ಕೊರೊನಾ ವಾರಿಯರ್ಸ್‍ಗೆ ಪರಿಹಾರ ಧನ:
ಪಾಲಿಕೆಯ ಖಾಯಂ ನೌಕರಳಾಗಿದ್ದ ಚನ್ನಮ್ಮ ಹಾಗೂ ಗುತ್ತಿಗೆ ನೌಕರರಾಗಿದ್ದ ಪಾಪನಾಯ್ಕ ಎಂಬುವವರು ಕೊರೊನಾ ವೈರಸ್ಗೆ ಬಲಿಯಾಗಿದ್ದು, ಸಾವಿಗೀಡಾದ ವಾರಿಯರ್ಗಳ ಕುಟುಂಬಕ್ಕೆ ಸರ್ಕಾರದಿಂದ 30 ಲಕ್ಷ ರೂ ಹಾಗೂ ಪಾಲಿಕೆಯಿಂದ ತಲಾ 3 ಲಕ್ಷ ರೂ ಪರಿಹಾರ ನೀಡಲು ಘೋಷಿಸಲಾಯಿತು ಹಾಗೂ ಮೃತರ ಕುಟುಂಬದಲ್ಲಿ ಒಬ್ಬರಿಗೆ ಪಾಲಿಕೆಯಲ್ಲಿ ಉದ್ಯೋಗ ನೀಡಲು ನಿರ್ಧರಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತ ಚಿದಾನಂದ ವಾಟರೆ, ಪಾಲಿಕೆಯ ಸದಸ್ಯರುಗಳಾದ ಜ್ಞಾನೇಶ್ವರ್, ಪ್ರಭಾಕರ್, ವಿಶ್ವಾಸ್ ಸೇರಿ ಪೌರ ಕಾರ್ಮಿಕರ ಕುಟುಂಬದವರು ಹಾಜರಿದ್ದರು.