ಶಿವಮೊಗ್ಗ: ಸಾಣೆಹಳ್ಳಿ ತರಳಬಾಳು ಜಗದ್ಗುರು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಮತ್ತೆ ಕಲ್ಯಾಣ ಕಾರ್ಯಕ್ರಮ ಆಗಸ್ಟ್ 23ರಂದು ಜಿಲ್ಲೆಯಲ್ಲಿ ಸಹಮತ ವೇದಿಕೆಯ ಆಶ್ರಯದಲ್ಲಿ ನಡೆಯಲಿದೆ ಎಂದು ವೇದಿಕೆಯ ಮುಖ್ಯಸ್ಥ ಓಂಕಾರಪ್ಪ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶರಣರ ತತ್ವ-ಆದರ್ಶಗಳ ಬಗ್ಗೆ ಈಗಿನ ಸಮುದಾಯದಲ್ಲಿ ಜಾಗೃತಿ ಮೂಡಿಸಿ ಜಾತಿ, ಮತ, ಪಂಥ ಭೇದವಿಲ್ಲದೆ ಸಮಸಮಾಜ ನಿರ್ಮಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ ಎಂದರು. ಆಗಸ್ಟ್ 1ರಿಂದ ಆರಂಭಗೊಂಡಿರುವ ಈ ಕಾರ್ಯಕ್ರಮವು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ನಿಗದಿತ ದಿನಾಂಕಗಳಂದು ನಡೆಯುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಆಗಸ್ಟ್ 23ರಂದು ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.