ಶಿವಮೊಗ್ಗ: ಯಾವುದೇ ಕಾರಣಕ್ಕೂ ಮ್ಯಾನ್‍ಹೋಲ್ ದುರಸ್ತಿಗೆ ಮ್ಯಾನುವಲ್ ಸ್ಕ್ಯಾವೆಂಜರ್ಗಳನ್ನು ಇಳಿಸದೆ ಕಡ್ಡಾಯವಾಗಿ ಯಂತ್ರವನ್ನು ಬಳಸಬೇಕು. ಒಂದು ವೇಳೆ ಮ್ಯಾನ್‍ಹೋಲ್ ಅವಘಡ ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮ್ಯಾನುವಲ್ ಸ್ಕ್ಯಾವೆಂಜರ್ ಜಿಲ್ಲಾ ಮಟ್ಟದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಕ್ಕಿಂಗ್ ಯಂತ್ರಗಳು ಲಭ್ಯವಿದೆ. ಕಡ್ಡಾಯವಾಗಿ ಸಕ್ಕಿಂಗ್ ಯಂತ್ರವನ್ನು ಮ್ಯಾನ್‍ಹೋಲ್ ಸರಿಪಡಿಸಲು ಬಳಸಬೇಕು. ಕಾರ್ಮಿಕರಿಗೆ ಕೈವಗಸು, ಗಮ್‍ಬೂಟ್‍ಗಳನ್ನು ನೀಡುವುದು ಮಾತ್ರವಲ್ಲದೆ ಅವರು ಪ್ರತಿ ಬಾರಿ ಅದನ್ನು ಬಳಸುತ್ತಿರುವುದರ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಸಾರ್ವಜನಿಕ ಶೌಚಾಲಯಗಳಲ್ಲಿ ಸಹ ಸ್ವಚ್ಛತೆಯನ್ನು ಪಾಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಕಸ ವಿಲೇವಾರಿ: ಪ್ರತಿ ಮನೆಯಿಂದ ಮೂಲದಿಂದಲೇ ಕಸವನ್ನು ವಿಂಗಡಿಸಿ ಸಂಗ್ರಹಿಸಲು ಈಗಾಗಲೇ ಹಲವು ಬಾರಿ ಸೂಚನೆ ನೀಡಲಾಗಿದ್ದರೂ ಇನ್ನೂ ಸರಿಯಾಗಿ ಅನುಷ್ಠಾನ ಆಗಿಲ್ಲ. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೇವಲ ಶೇ. 27ರಷ್ಟು ಮಾತ್ರ ಮೂಲದಲ್ಲಿಯೇ ಕಸವನ್ನು ವಿಂಗಡಿಸಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಎಲ್ಲಾ ಕಡೆ ಕಡ್ಡಾಯವಾಗಿ ಶೇ. 100ರಷ್ಟು ಕಸವನ್ನು ಮೂಲದಲ್ಲಿಯೇ ವಿಂಗಡಿಸಿ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಓದಿ : ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ: ಆಕಾಂಕ್ಷಿಯನ್ನೇ ಅಪಹರಣ ಮಾಡಿದ ಆರೋಪ
ಘನತ್ಯಾಜ್ಯ ವಿಲೇವಾರಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಹಲವು ಸ್ಥಳೀಯ ಸಂಸ್ಥೆಗಳು ಸಂಗ್ರಹಿಸಿದ ಕಸವನ್ನು ಡಂಪಿಂಗ್ ಯಾರ್ಡ್‍ನಲ್ಲಿ ತಂದು ಸುರಿದ ಬಳಿಕ ವಿಂಗಡಣೆ ಮಾಡುವುದು ಕಂಡು ಬಂದಿದ್ದು, ಇದನ್ನು ಸರಿಪಡಿಸಿಕೊಳ್ಳಬೇಕು. ಈ ರೀತಿ ಕಸವನ್ನು ರಾಶಿ ಹಾಕಿದರೆ ಸಂಬಂಧಪಟ್ಟ ಮುಖ್ಯಾಧಿಕಾರಿಗೆ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುವುದು. ಮನೆಯಿಂದ ತ್ಯಾಜ್ಯ ಸಂಗ್ರಹಿಸುವ ವೇಳೆ ಒಣ ಕಸ ಮತ್ತು ಹಸಿ ಕಸವನ್ನು ಕಡ್ಡಾಯವಾಗಿ ವಿಂಗಡಿಸಿಯೇ ಪಡೆದುಕೊಳ್ಳಬೇಕು. ವಿಂಗಡಿಸಿದ ಕಸವನ್ನು ಗಾಡಿಯವರು ಒಂದೇ ಕಡೆ ರಾಶಿ ಹಾಕುವ ಬಗ್ಗೆಯೂ ದೂರುಗಳು ಬಂದಿವೆ. ಕಸದ ಗಾಡಿಯಲ್ಲಿ ಒಣ ಕಸ ಮತ್ತು ಹಸಿ ಕಸಕ್ಕೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ನಗರ ಪ್ರದೇಶದಲ್ಲಿ ಪೈಪ್ ಕಾಂಪೋಸ್ಟ್ ಪದ್ಧತಿಯನ್ನು ಜನಪ್ರಿಯಗೊಳಿಸಬೇಕು. ಪ್ರಥಮ ಹಂತದಲ್ಲಿ ಸರ್ಕಾರಿ ವಸತಿ ಗೃಹಗಳಲ್ಲಿ ಪೈಪ್ ಕಾಂಪೋಸ್ಟ್ ಅಳವಡಿಕೆ ಮಾಡಬೇಕು. ಪೈಪ್ ಕಾಂಪೋಸ್ಟ್ ಅಳವಡಿಕೆ ಮಾಡಿದ ಪ್ರದೇಶಗಳಲ್ಲಿ ಒಣ ಕಸ ಸಂಗ್ರಹಿಸಲು ವಾರಕ್ಕೆ ಎರಡು ಬಾರಿ ಮಾತ್ರ ಕಸದ ಗಾಡಿ ತೆರಳಬೇಕು ಎಂದು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಯೋಜನಾ ನಿರ್ದೇಶಕ ಡಾ. ನಾಗೇಂದ್ರ ಹೊನ್ನಳ್ಳಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.