ಶಿವಮೊಗ್ಗ: ಮಲೆನಾಡಿನ ಪ್ರಸಿದ್ದ ಪಕ್ಷಿಧಾಮಗಳಲ್ಲಿ ಒಂದಾದ, ಮಂಡಗದ್ದೆಯ ಪಕ್ಷಿಧಾಮ ಅವಸಾನದತ್ತ ಸಾಗಿದೆ. ಪಕ್ಷಿಧಾಮದಲ್ಲಿ ಪಕ್ಷಿಗಳಿಗೆ ಕನಿಷ್ಠ ಮೂಲ ಸೌಕರ್ಯ ಇಲ್ಲದಂತಾಗಿದ್ದು, ಇದರಿಂದ ಮುಂದೂಂದು ದಿನ ಮಂಡಗದ್ದೆ ಪಕ್ಷಿಧಾಮ ಇಲ್ಲದಂತೆ ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ದೇಶ- ವಿದೇಶ ಹಕ್ಕಿಗಳ ನೆಚ್ಚಿನ ತಾಣ ಮಂಡಗದ್ದೆ: ಮಂಡಗದ್ದೆಯಲ್ಲಿ ಪಕ್ಷಿಗಳಿಗೆ ಭಯರಹಿತ ವಾತಾವರಣವಿದ್ದು, ಹರಿಯುವ ತುಂಗಾ ನದಿಯ ಮಧ್ಯದಲ್ಲಿ ಪಕ್ಷಿಗಳು ವಿಶೇಷವಾದ ಹೊಳಲಕ್ಕಿ ಮರದಲ್ಲಿ ಗೂಡು ಕಟ್ಟಿ, ಮರಿ ಮಾಡಿ, ಮರಿಗಳು ಹಾರುವ ತನಕ ಇದ್ದು, ನಂತರ ತಮ್ಮ ಸ್ವ ಸ್ಥಾನಕ್ಕೆ ವಾಪಸ್ ಆಗುತ್ತವೆ. ಇಲ್ಲಿಗೆ ಸೈಬೀರಿಯಾ, ಚೀನಾ, ಲಡಾಖ್, ಆಫ್ಘಾನಿಸ್ತಾನ ದಿಂದ ವಿವಿಧ ಜಾತಿಯ ಪಕ್ಷಿಗಳು ವಲಸೆ ಬರುತ್ತಿದ್ದವು.
ನದಿ ಮಧ್ಯದ ಮರದಲ್ಲಿ ಗೂಡು ಕಟ್ಟಿ, ಮೊಟ್ಟೆಯಿಟ್ಟು, ಮರಿ ಮಾಡಿ, ಮರಿಗಳು ಹಾರುವ ತನಕ ಇವುಗಳಿಗೆ ಯಾವುದೇ ಅಪಾಯವಿಲ್ಲ. ಅಲ್ಲದೆ ಪಕ್ಷಿಗಳಿಗೆ ಸುತ್ತಮುತ್ತ ಆಹಾರ ಸಿಗುವ ಕಾರಣ ತಮ್ಮ ನೆಲೆಯನ್ನು ಕಂಡು ಕೊಂಡಿದ್ದವು. ಆದರೆ ಈಗ ಇಲ್ಲಿ ಮರಗಳ ಸಂಖ್ಯೆ ಕಡಿಮೆಯಾಗಿದೆ.
ತುಂಗಾ ಮೇಲ್ದಂಡೆ ಯೋಜನೆಯಿಂದ ಪಕ್ಷಿಗಳ ಹೊಳೆಲಕ್ಕಿ ಮರಗಳು ಬಿದ್ದು ಹೋಗಿದೆ. ಹತ್ತಾರು ಮರಗಳು ಈಗ ನಾಲ್ಕಕ್ಕೆ ಬಂದಿವೆ. ವರ್ಷದ 365 ದಿನಗಳ ಕಾಲ ನೀರು ನಿಲ್ಲುವುದರಿಂದ ಮರಗಳು ಬಿದ್ದು ಹೋಗುತ್ತಿವೆ. ಅಲ್ಲದೆ ಪ್ರವಾಹ ಹೆಚ್ಚಾಗಿ ಗೂಡುಗಳು ಸಾಕಷ್ಟು ಸಲ ತೇಲಿ ಹೋಗಿವೆ. ಇದರಿಂದ ವಿದೇಶಿ ಹಕ್ಕಿಗಳು ಇಲ್ಲಿಗೆ ಬರುತ್ತಿಲ್ಲ. ಇಲ್ಲಿಗೆ ಸ್ಥಳೀಯ ಬೆಳಕ್ಕೆ, ಜಾಲಪಾದ, ನೀರು ಕೋಳಿ ರೀತಿಯ ಪಕ್ಷಿಗಳು ಮಾತ್ರ ಆಗಮಿಸುತ್ತಿವೆ.
ಅಭಿವೃದ್ದಿ ಕಾಣದ ಪಕ್ಷಿಧಾಮ: ಒಂದು ಕಡೆ ಪಕ್ಷಿಧಾಮದಲ್ಲಿ ವಲಸೆ ಹಕ್ಕಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆಯೇ ಸರ್ಕಾರಕ್ಕೆ ಮಂಡಗದ್ದೆ ಪಕ್ಷಿಧಾಮದ ಮೇಲಿನ ಆಸಕ್ತಿ ಸಹ ಕಡಿಮೆಯಾಗಿದೆ. ಅಭಿವೃದ್ದಿ ಮರಿಚಿಕೆಯಾಗಿದೆ. ಇಲ್ಲಿನ ವೀಕ್ಷಣ ಗೋಪುರ ಶೀಥಿಲವಾಗಿದೆ.
ಪ್ರವಾಸಿತಾಣದಲ್ಲಿ ಮದ್ಯದ ಬಾಟಲಿಯ ರಾಶಿಯಿದೆ. ಮಹಿಳೆಯರಿಗೆ ಮಕ್ಕಳಿಗೆ ಕನಿಷ್ಟ ಶೌಚಾಲಯವಿಲ್ಲ. ಪ್ರವಾಸಿಗರು ಬಂದರೆ ಅವರಿಗೆ ಮಾಹಿತಿ ನೀಡುವವರಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದ ಹವ್ಯಾಸಿ ಛಾಯಾಗ್ರಾಹಕರು ನಿರಾಸೆ ಅನುಭವಿಸುವಂತಾಗಿದೆ. ಸರ್ಕಾರದ ನಿರ್ಲಕ್ಷ್ಯಕ್ಕೆ ಸ್ಥಳೀಯರು ಕಿಡಿ ಕಾರಿದ್ದಾರೆ.