ಶಿವಮೊಗ್ಗ: ವಿಕಲಚೇತನ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಸತೀಶ್(38) ಎಂಬಾತನನ್ನು ಸ್ಥಳೀಯರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ತೀರ್ಥಹಳ್ಳಿಯ ಗಾರ್ಡರಗದ್ದೆ ಗ್ರಾಮದಲ್ಲಿ ನಡೆದಿದೆ.
ಗಾರ್ಡರಗದ್ದೆಯ 25 ವರ್ಷದ ವಿಕಲ ಚೇತನ ಯುವತಿಯನ್ನು ಆಕೆಯ ವೀಲ್ ಚೇರ್ನಲ್ಲಿ ಕಟ್ಟಿ ಹಾಕಿ ಅತ್ಯಾಚಾರಕ್ಕೆ ಸತೀಶ್ ಯತ್ನಿಸಿದ್ದು, ಯುವತಿ ಕೂಗಿಕೊಂಡಿದ್ದಾಳೆ. ಇದರಿಂದ ಅಕ್ಕ ಪಕ್ಕದ ಮನೆಯವರು, ಗ್ರಾಮಸ್ಥರು ಬಂದು ಸುರೇಶ್ನನ್ನು ಹಿಡಿದು ವಿದ್ಯುತ್ ಕಂಬಕ್ಕೆ ಕಟ್ಟಿ ಚೆನ್ನಾಗಿ ಥಳಿಸಿ, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸತೀಶ್ ತೀರ್ಥಹಳ್ಳಿ ತಾಲೂಕು ಶಿವರಾಜಪುರದ ನಿವಾಸಿಯಾಗಿದ್ದು, ತನ್ನ ಪತ್ನಿಯ ಸಹೋದರನ ಮನೆಗೆ ಬಂದಿದ್ದ ಎನ್ನಲಾಗಿದೆ. ವಿಕಲಚೇತನೆಯ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಸತೀಶ್ ಮನೆಗೆ ನುಗ್ಗಿ ಈ ಕೃತ್ಯ ನಡೆಸುವಾಗ ಯುವತಿ ಕೂಗಿಕೊಂಡಿದ್ದಾಳೆ.
ಸದ್ಯ ಈ ಕುರಿತು ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯನ್ನು ಪರೀಕ್ಷೆಗಾಗಿ ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.