ಶಿವಮೊಗ್ಗ : ಕುಡಿದ ಮತ್ತಿನಲ್ಲಿ ತಂದೆಯನ್ನು ಮಗನೇ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮಂಡೇನಕೊಪ್ಪ ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗ ತಾಲೂಕು ಮಂಡೇನಕೊಪ್ಪ ಗ್ರಾಮದ ಕುಮಾರನಾಯ್ಕ(55) ಎಂಬಾತ ಕೊಲೆಯಾದ ದುರ್ವೈವಿ. ಮಧು ನಾಯ್ಕ(28) ಎಂಬಾತ ತಂದೆಯನ್ನು ಕೊಂದ ಆರೋಪಿತ ಮಗ.
ತಂದೆ-ಮಗ ಇಬ್ಬರು ನಿನ್ನೆ ರಾತ್ರಿ ಕುಡಿದು ಜಗಳವಾಡಿದ್ದಾರೆ. ಈ ವೇಳೆ ಮಧುನಾಯ್ಕ ಅಲ್ಲೇ ಇದ್ದ ದೊಣ್ಣೆಯಿಂದ ತಂದೆಗೆ ಹೊಡೆದಿದ್ದಾನೆ. ಈ ವೇಳೆಗೆ ಕುಮಾರ ನಾಯ್ಕನ ಕಿವಿಯಲ್ಲಿ ರಕ್ತ ಬಂದಿದೆ. ಗಾಯಗೊಂಡಿದ್ದರೂ ಮನೆಯಿಂದ ಹೊರಗೆ ಹೋಗಿದ್ದಾನೆ. ಬೆಳಗ್ಗೆ ಮನೆ ಮುಂದೆ ನೋಡಿದಾಗ ಆತನ ಶವ ಪತ್ತೆಯಾಗಿದೆ.
ಇದನ್ನು ನೋಡಿ ಮಧುನಾಯ್ಕ ತನ್ನ ತಂದೆಯ ಶವ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾನೆ. ಈ ವೇಳೆ ಮೃತ ಕುಮಾರನಾಯ್ಕನ ಮಗಳು ಶಿಲ್ಪಬಾಯಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ತುಂಗಾ ನಗರ ಪೊಲೀಸರು ಮಧುನಾಯ್ಕನನ್ನು ಬಂಧಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಓದಿ: ಮೈಸೂರು ಚಿನ್ನದಂಗಡಿ ದರೋಡೆ ಪ್ರಕರಣ: 7 ಆರೋಪಿಗಳಿಗೆ ನ್ಯಾಯಾಂಗ ಬಂಧನ