ಶಿವಮೊಗ್ಗ: ಹಂದಿ ಬೇಟೆಗಾಗಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ತಂತಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಓರ್ವನ ಸಾವಿಗೆ ಕಾರಣರಾದ ಇಬ್ಬರು ಆರೋಪಿಗಳನ್ನು ಸಾಗರ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸಾಗರ ತಾಲೂಕು ಬರೂರು ಗ್ರಾಮದ ಬಸವನಬ್ಯಾಣದಲ್ಲಿ ಸೆಪ್ಟೆಂಬರ್ 13ರಂದು ಮಂಜುನಾಥ್ ಎಂಬಾತ ಅನುಮಾಸ್ಪದವಾಗಿ ಮೃತಪಟ್ಟಿದ್ದ. ಈ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ ಮೃತ ಮಂಜುನಾಥನ ಸಹೋದರ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಸಾಗರ ಗ್ರಾಮಾಂತರ ಠಾಣೆಯ ಪೊಲೀಸರು ಇದೇ ಗ್ರಾಮದ ಅನಂತಪ್ಪ (50) ಹಾಗೂ ಗಣೇಶ್ (28) ಎಂಬ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದರು. ಈ ವೇಳೆ ಆರೋಪಿಗಳು ಕಾಡು ಹಂದಿ ಬೇಟೆಗೆ ತಮ್ಮ ಹೊಲದಿಂದ ವಿದ್ಯುತ್ ತಂತಿ ಮೂಲಕ ಬೇಲಿ ನಿರ್ಮಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.
ಬಂಧಿತರಿಂದ ವಿದ್ಯುತ್ ಹರಿಸಿದ್ದ ತಂತಿ ಹಾಗೂ ಪರವಾನಿಗೆ ಇಲ್ಲದ ಎರಡು ನಾಡ ಪಿಸ್ತೂಲನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ಭೇದಿಸುವಲ್ಲಿ ಸಾಗರ ಗ್ರಾಮಾಂತರ ಠಾಣೆಯ ಪ್ರಭಾರಿ ಸಿಪಿಐ ಕುಮಾರಸ್ವಾಮಿ, ಪಿಎಸ್ಐ ಭರತ್ ಹಾಗೂ ಸಿಬ್ಬಂದಿಯವರಾದ ಅಶೋಕ್, ರಾಘವೇಂದ್ರ ಶೆಟ್ಟಿ, ಪ್ರಕಾಶ್ ಅಂಬ್ಲಿ ಇದ್ದರು.