ಶಿವಮೊಗ್ಗ : ಭದ್ರಾವತಿ ತಾಲೂಕು ಹೊಳೆಹೊನ್ನೂರು ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿನ ಗಾಂಧಿ ಪುತ್ಥಳಿಯನ್ನು ಕಿಡಿಗೇಡಿಗಳಿಬ್ಬರು ಧ್ವಂಸಗೊಳಿಸಿದ ವಿಡಿಯೋ ವೈರಲ್ ಆಗಿದೆ. ಆಗಸ್ಟ್ 21ರ ಬೆಳಗಿನ ಜಾವ ಯುವಕರಿಬ್ಬರು ಬೈಕ್ನಲ್ಲಿ ಬಂದಿದ್ದಾರೆ. ಇವರು ಬರುವುದಕ್ಕೂ ಮುನ್ನ ಎರಡು ಲಾರಿಗಳು ಗಾಂಧಿ ವೃತ್ತದಿಂದ ಸನ್ಯಾಡಿ ಕೊಡಮಗ್ಗೆ ಗ್ರಾಮದ ಕಡೆಯಿಂದ ಚನ್ನಗಿರಿ ರಸ್ತೆ ಕಡೆ ಸಾಗುತ್ತವೆ.
ಈ ವೇಳೆ ಯುವಕರಿಬ್ಬರು ಚನ್ನಗಿರಿ ರಸ್ತೆಯಿಂದ ಗಾಂಧಿವೃತ್ತದ ಮೂಲಕ ಸನ್ಯಾಡಿ ಕೊಡಮಗ್ಗೆ ಗ್ರಾಮದ ಕಡೆಗೆ ಬೈಕ್ನಲ್ಲಿ ವೇಗವಾಗಿ ಹೋಗುತ್ತಾರೆ. ಪುನಃ ಯುವಕರು ಅಷ್ಟೇ ವೇಗವಾಗಿ ವಾಪಸ್ ಗಾಂಧಿ ಪ್ರತಿಮೆಯ ಕಡೆ ಬರುತ್ತಾರೆ. ಬೈಕ್ ಹಿಂಬದಿ ಕುಳಿತಿದ್ದ ಕಪ್ಪು ಬಣ್ಣದ ಟೀ ಶರ್ಟ್ ಧರಿಸಿದ್ದ ಯುವಕ ಪ್ರತಿಮೆ ಬಳಿ ಹೋಗುತ್ತಾನೆ. ಹಳದಿ ಬಣ್ಣದ ಟೀ ಶರ್ಟ್ ಧರಿಸಿದ ಯುವಕ ಬೈಕ್ ಬಳಿಯೇ ನಿಂತಿರುತ್ತಾನೆ.
ಹಳದಿ ಟೀ ಶರ್ಟ್ ಧರಿಸಿದ ಯುವಕ, ಗಾಂಧಿ ಪುತ್ಥಳಿಯ ಬಳಿ ಹೋಗಿ ಗಾಂಧಿ ಕಾಲು ಅಲುಗಾಡಿಸುತ್ತಾನೆ. ಅಲುಗಾಡಿಸುತ್ತಿದ್ದಂತೆ ಪ್ರತಿಮೆ ಕುಸಿದು ಬೀಳುತ್ತದೆ. ಹಳದಿ ಬಣ್ಣದ ಟೀ ಶರ್ಟ್ ಧರಿಸಿದ ಯುವಕ ಬೈಕ್ ಸ್ಟಾರ್ಟ್ ಮಾಡಿ ಬೈಕ್ ರೆಡಿ ಇಟ್ಟುಕೊಳ್ಳುತ್ತಾನೆ. ಪ್ರತಿಮೆ ಬೀಳಿಸಿದ ಯುವಕ ಬಂದು ಬೈಕ್ ಏರುತ್ತಲೇ ಸನ್ಯಾಡಿ ಕೊಡಮಗ್ಗೆ ಕಡೆ ಹೋಗುತ್ತಾರೆ.
ಕಿಡಿಗೇಡಿಗಳ ಕೃತ್ಯವನ್ನು ಪಟ್ಟಣದಲ್ಲಿ ಎಲ್ಲಾ ಪಕ್ಷದವರು, ಸಂಘಟನೆಗಳು ಖಂಡಿಸಿವೆ. ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆೆ. ಗಾಂಧಿ ವೃತ್ತವು ಹೊಳೆಹೊನ್ನೂರು ಪೊಲೀಸ್ ಠಾಣೆಯಿಂದ ಇನ್ನೂರು ಮೀಟರ್ ದೂರದಲ್ಲಿದೆ.
ಕೃತ್ಯ ಖಂಡಿಸಿದ್ದ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ X ಆ್ಯಪ್‌ನಲ್ಲಿ, ಗಾಂಧಿ ಪ್ರತಿಮೆ ಧ್ವಂಸಗೊಳಿಸಿರುವ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ನೆಲದ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆ, ಸಂವಿಧಾನ ಮತ್ತು ಕಾನೂನಿನ ಬಗೆಗೆ ಗೌರವ ಇಲ್ಲದವರು ಮಾತ್ರ ಇಂಥ ಹೀನ ಕೃತ್ಯ ಎಸಗಲು ಸಾಧ್ಯ. ಕುಕೃತ್ಯದ ಹಿಂದೆ ಯಾರೇ ಇರಲಿ ಅವರನ್ನು ಹಿಡಿದು ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸುತ್ತೇವೆ. ಯಾರೊಬ್ಬರೂ ಈ ಬಗ್ಗೆ ಉದ್ವೇಗಕ್ಕೊಳಗಾಗಿ ಕಾನೂನು ಕೈಗೆತ್ತಿಕೊಳ್ಳದೆ, ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದರು.
ಇದನ್ನೂ ಓದಿ : ಶಿವಮೊಗ್ಗ ಗಾಂಧಿ ಪ್ರತಿಮೆ ಧ್ವಂಸ ಕೇಸ್: ಕಾನೂನು ಪ್ರಕಾರ ಕಠಿಣ ಶಿಕ್ಷೆ- ಸಿಎಂ ಸಿದ್ದರಾಮಯ್ಯ