ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುವಂತೆ ಕೋರಿ ಮಧು ಬಂಗಾರಪ್ಪ ರಾಜ್ಯ ರೈತ ಸಂಘದ ಕಾರ್ಯಧ್ಯಕ್ಷರಾದ ಎಚ್.ಎಸ್ ಬಸವರಾಜಪ್ಪನವರನ್ನು ಭೇಟಿ ಮಾಡಿದ್ದಾರೆ.
ಇಂದು ಲೋಕಸಭಾ ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ರೈತ ಮುಂಖಂಡರಾದ ಎಚ್.ಎಸ್ ಬಸವರಾಜಪ್ಪ ಅವರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಕೋರಿದರು. ಭೇಟಿ ಬಳಿಕ ಮಾತನಾಡಿದ ಅವರು, ನಮ್ಮ ತಂದೆಯವರು ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಿದ್ದರು. ಕುಮಾರಸ್ವಾಮಿ ಅವರು ರಾಜ್ಯ ರೈತರ ಸಾಲಮನ್ನಾ ಮಾಡಿದ್ದಾರೆ. ನಾನು ಸಹ ಪಾದಯಾತ್ರೆ ಮಾಡುವ ಮೂಲಕ ನೀರಾವರಿ ಯೋಜನೆಗಳಿಗೆ ಹೋರಾಟ ಮಾಡಿದ್ದೇನೆ. ಹಾಗಾಗಿ ರೈತರ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಹಾಗಾಗಿ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವ ಮೂಲಕ ಆಶೀರ್ವಾದ ನೀಡಿದರೆ ರೈತರ ಧ್ವನಿಯಾಗಿ ಜಿಲ್ಲೆಯ ಕೆಲಸ ಮಾಡುತ್ತೇನೆ ಎಂದರು.
ಬಿಜೆಪಿ ವ್ಯಾಪಾರಿ ಪಕ್ಷವೇ ಹೊರತು, ಭಾರತೀಯ ಜನತಾ ಪಕ್ಷವಲ್ಲ .ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡುವುದು ಪಾಪದ ಕೆಲಸ ಎಂದು ಹೇಳುವ ಮೂಲಕ ರೈತರಿಗೆ ಅಪಮಾನ ಮಾಡಿದೆ. ದೇಶದಲ್ಲಿ ರೈತರು ಮತ್ತು ಸೈನಿಕರ ಮೇಲೆ ರಾಜಕೀಯ ಮಾಡುವುದನ್ನ ಬಿಡಬೇಕು. ಹಾಗಾಗಿ ನಾನು ಅನ್ನ ಹಾಕುವ ರೈತರನ್ನ ಹಾಗೂ ದೇಶ ಕಾಯುವ ಸೈನಿಕರನ್ನ ರಾಜಕೀಯದಲ್ಲಿ ತರಲು ಬಯಸುವುದಿಲ್ಲ. ಇದು ದೇಶದ್ರೋಹದ ಕೆಲಸ ಎಂದರು.