ಶಿವಮೊಗ್ಗ: ನಾನು ಸಿಗಂದೂರಿನ ಚೌಡಮ್ಮ ದೇವಿಗೆ ಬರಗಾಲ ನೀಡಬೇಡಮ್ಮ ಎಂದು ಕೇಳಿಕೊಳ್ಳಲು ಬಂದಿದ್ದೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಸಾಗರ ತಾಲೂಕು ಪ್ರಸಿದ್ದ ಧಾರ್ಮಿಕ ಕ್ಷೇತ್ರಕ್ಕೆ ಕುಟುಂಬಸಮೇತರಾಗಿ ನವರಾತ್ರಿ ಪೂಜೆಗೆ ಆಗಮಿಸಿ, ದೇವಿ ಚೌಡಮ್ಮನ ದರ್ಶನ ಪಡೆದು, ವಿಶೇಷ ಪೂಜೆ ನಡೆಸಿ, ಹೋಮದಲ್ಲಿ ಭಾಗಿಯಾಗಿದರು.
ನಂತರ ಮಾತನಾಡಿದ ಅವರು, ನಾನು ಶ್ರೀ ಕ್ಷೇತ್ರಕ್ಕೆ ನವರಾತ್ರಿ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದೇನೆ. ಬರಗಾಲ ಕೊಡಬೇಡಮ್ಮ ಎಂದು ಪ್ರಾರ್ಥಿಸಿದ್ದೇನೆ ಎಂದರು. ಬೆಳಕು ನೀಡುವ ಕ್ಷೇತ್ರದಲ್ಲಿ ಹೆಚ್ಚಿಗೆ ಮಳೆಯಾಗುವಂತೆ ಮಾಡಿದರೆ, ಇನ್ನೂ ಹೆಚ್ಚು ಬೆಳಕು ನೀಡುವಂತಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡು ತಾಯಿ ಎಂದು ಬೇಡಿಕೊಂಡಿದ್ದೇನೆ ಎಂದರು. ಕಳಸವಳ್ಳಿ ಹಾಗೂ ಹೊಳೆಬಾಗಿಲಿಗೆ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ಕೂಡ ವೀಕ್ಷಿಸಿದ್ದೇನೆ. ಕಾಮಗಾರಿ ನಡೆಸುತ್ತಿರುವ ಇಂಜಿನಿಯರ್ಗಳ ಬಳಿ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.
ನಾಡಹಬ್ಬ ದಸರಾ ಆಚರಣೆಗೆ ಸರ್ಕಾರದ ಅನುದಾನ ಕೊರತೆ ವಿಚಾರವಾಗಿ ಮಾತನಾಡಿ, ದಸರಾ ಆಚರಣೆಗೆ ನಾವೇ ದುಡ್ಡು ಹಾಕಿಕೊಂಡು ಈ ಬಾರಿ ಆಚರಣೆ ಮಾಡಬೇಕಿದೆ. ಬರಗಾಲ ಇರುವಾಗ ದುಡ್ಡು ಹೊಂದಿಸುವುದು ಕಷ್ಟವಾಗುತ್ತದೆ. ಇದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೂಡ ಹೇಳಿದ್ದಾರೆ. ದುಡ್ಡು ಖರ್ಚು ಮಾಡಿಯೇ ಹಬ್ಬ ಆಚರಿಸಬೇಕೆಂದೇನಿಲ್ಲ, ನಮ್ಮ ಹೃದಯದಿಂದಲೂ ಹಬ್ಬ ಆಚರಣೆ ಮಾಡುವಂತಾಗಬೇಕು ಎಂದರು.
ಸಚಿವರಿಗೆ ಹೊಸ ಕಾರು ಖರೀದಿ ವಿಚಾರ: ಶಾಸಕರು, ಸಚಿವರಿಗೆ ಹೊಸ ಕಾರು ತೆಗೆದುಕೊಳ್ಳಲು ಹಣ ಇರುತ್ತೆ. ದಸರಾಗೆ ಹಣ ನೀಡಲ್ಲ ಎಂದು ಮಾಜಿ ಸಚಿವರಾದ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಿಂದಿನವರು ಜಟಕಾ ಗಾಡಿಯಲ್ಲಿ ಹೋಗುತ್ತಿದ್ರಾ ಎಂದು ಪ್ರಶ್ನಿಸಿದರು. ಅವರು ಕೂಡ ಕಾರುಗಳಲ್ಲೇ ಓಡಾಡಿದ್ದರು. ಇದನ್ನು ಬೇರೆ, ಬೇರೆ ರೀತಿಯಲ್ಲಿ ಅನಾವಶ್ಯಕವಾಗಿ ಹೋಲಿಕೆ ಮಾಡಬಾರದು ಎಂದರು. ಈಶ್ವರಪ್ಪ ಹಿರಿಯರಿದ್ದಾರೆ. ಅವರ ಮೇಲೆ ನನಗೆ ಗೌರವವಿದೆ. ಈಶ್ವರಪ್ಪನವರು ಈ ರೀತಿ ಎಲ್ಲಾ ಮಾತನಾಡಬಾರದು ಎಂದರು.
ಶರಾವತಿ ಮುಳುಗಡೆ ಸಂತ್ರಸ್ತರ ಹಿತ ಕಾಪಾಡಲು ಬದ್ಧ: ರಾಜ್ಯ ಸರ್ಕಾರ ಶರಾವತಿ ಮುಳುಗಡೆ ಸಂತ್ರಸ್ತರ ಹಿತ ಕಾಪಾಡಲು ಬದ್ದವಾಗಿದೆ. ರೈತರ ಬೇಡಿಕೆ, ಹಕ್ಕು ಪತ್ರ ಕೊಡುವ ಭರವಸೆ ಸಿಎಂ ಕೊಟ್ಟಿದ್ದಾರೆ. ಅದನ್ನು ನಾವು ಪಾಲಿಸುತ್ತೇವೆ ಎಂದರು. ಶರಣ ಪ್ರಕಾಶ್ ಪಾಟೀಲ್ ಹೆಸರೇಳಿ ಆತ್ಮಹತ್ಯೆ ಮಾಡಿಕೊಂಡ ವಿಚಾರ ನನಗೆ ಗೂತ್ತಿಲ್ಲ ಎಂದರು. ಈ ವೇಳೆ ಶಿರಸಿ ಶಾಸಕ ಭೀಮಪ್ಪ ಇದ್ದರು.
ಇದನ್ನೂ ಓದಿ: ಬಿಜೆಪಿಗರು ಬಸ್ ನಿಲ್ದಾಣದಲ್ಲಿ ಜೋತಿಷ್ಯ ಹೇಳಲಿ: ಸಚಿವ ಮಧು ಬಂಗಾರಪ್ಪ