ಶಿವಮೊಗ್ಗ: ರಾಗಿಗುಡ್ಡದ 8ನೇ ಕ್ರಾಸ್ನಲ್ಲಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದ ಘಟನಾ ಸ್ಥಳಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಅಲ್ಲಿನ ನಿವಾಸಿಗಳಿಗೆ ಧೈರ್ಯ ತುಂಬಿದರು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಗಿಗುಡ್ಡದಲ್ಲಿ ನಡೆದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೆನೆ. ಹಿಂದೂ ಮಹಾಸಭಾ ಗಣೇಶನ ವಿಸರ್ಜನೆ ಚೆನ್ನಾಗಿ ನಡೆಯಿತು. ಈದ್ ಮೆರವಣಿಗೆಯು ನಗರದಲ್ಲಿ ಚೆನ್ನಾಗಿ ನಡೆದಿದೆ.
ರಾಗಿಗುಡ್ಡದಲ್ಲಿ ಕೊನೆಗಳಿಗೆಯಲ್ಲಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಪೊಲೀಸರು ಪ್ರಸ್ತುತ 60 ಜನರನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಒಬ್ಬ ವ್ಯಕ್ತಿಯ ಮೂಗಿಗೆ ಗಾಯವಾಗಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡಿದ್ದೆ. ಅವರು 144 ಸೆಕ್ಷನ್ ಜಾರಿ ಮಾಡುವುದು ಸೂಕ್ತ ಎಂದು ಹೇಳಿದ್ದರು. ನಗರದಲ್ಲಿ ಸೆಕ್ಷನ್ ಸಡಿಲುಗೊಳಿಸಲು ಕೆಲವರು ಮನವಿ ಮಾಡಿದ್ದರು. ಇದಕ್ಕೂ ಸ್ಪಂದಿಸಿದ್ದೇನೆ ಎಂದು ತಿಳಿಸಿದರು.
ಈಗ ರಾಗಿಗುಡ್ಡದಲ್ಲಿ ಮಾತ್ರ ಸೆಕ್ಷನ್ ಜಾರಿ ಮಾಡಲಾಗಿದೆ. ಮುಂದೆ ಅಹಿತಕರ ಘಟನೆ ನಡೆಯಬಾರದು ಎಂದು ಹೀಗೆ ಮಾಡಲಾಗಿದೆ. ಇಲ್ಲಿ ನಾವು ಮೊದಲು ಕಾನೂನಿಗೆ ಗೌರವ ಕೊಡಬೇಕಾಗುತ್ತದೆ. ಯಾರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಅವರನ್ನು ಕಾನೂನಿನ ಅಡಿ ಶಿಕ್ಷೆಗೊಳಪಡಿಸಲಾಗುತ್ತದೆ. ಅಧಿಕಾರಿಗಳಿಗೂ ಕಾನೂನು ಕ್ರಮಕ್ಕೆ ನಾನು ಸೂಚಿಸಿದ್ದೇನೆ. ಈ ವಿಚಾರಕ್ಕೀಗ ಹೆಚ್ಚಿನ ಒತ್ತು ನೀಡುವುದು ಬೇಡ. ಅದಕ್ಕಾಗಿ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅವರು ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ವಿರೋಧ ಪಕ್ಷದವರು ತಮ್ಮಲ್ಲಿನ ಮಾಹಿತಿಯನ್ನು ಅಧಿಕಾರಿಗಳ ಜೊತೆ ಹಂಚಿಕೊಳ್ಳಬೇಕಿದೆ. ಅದನ್ನು ಬಿಟ್ಟು ಆರೋಪ ಮಾಡುವುದು ಬೇಡ. ಕಟೌಟ್ ಹಾಕುವುದು ಸರಿ ಅಲ್ಲ. ಮೆರವಣಿಗೆಯಲ್ಲಿ ಬಳಸಿದ ಕತ್ತಿ ಹಾಗೂ ಇತರ ಆಯುಧಗಳು ಒರಿಜಿನಲ್ ಅಲ್ಲ. ರಾಗಿಗುಡ್ಡದಲ್ಲಿ ನಡೆದ ಘಟನೆಯಲ್ಲಿ ಮನೆಗಳ ಕಿಟಕಿ ಗಾಜು ಒಡೆದಿರುವುದು ನೋಡಿ ನನಗೆ ಬೇಸರವಾಯಿತು. ಅಲ್ಲದೇ ಈ ದುಃಖದ ಸಮಯದಲ್ಲಿ ಎಲ್ಲರ ಮನೆಗಳಿಗೆ ನಾನು ಹೋಗುವುದು ಸರಿಯಲ್ಲ ಎಂದು ಕೆಲ ಮನೆಗಳಿಗೆ ಹೋಗಿಲ್ಲ. ಇದಕ್ಕೆ ಬೇರೆ ಅರ್ಥ ನೀಡುವುದು ಕೂಡ ಸರಿಯಲ್ಲ. ಸದ್ಯ ಇಲ್ಲಿನ ಪರಿಸ್ಥಿತಿ ಹತೋಟಿಯಲ್ಲಿದೆ. ಈ ವಿಚಾರವಾಗಿ ಎಲ್ಲಿ ಕೂಡ ಉದ್ವಿಗ್ನತೆ ಉಂಟಾಗಬಾರದು ಎಂದು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಮೆರವಣಿಗೆ ವೇಳೆ ಕಲ್ಲು ತೂರಾಟ; ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿ