ಶಿವಮೊಗ್ಗ: ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಕಂಟಕವನ್ನುಂಟು ಮಾಡುತ್ತಿದೆ ಎಂದು ಮಾಜಿ ಶಾಸಕ ಎಸ್. ಮಧು ಬಂಗಾರಪ್ಪ ಆರೋಪಿಸಿದ್ದಾರೆ.
ಸ್ವಗ್ರಾಮ ಸೊರಬದ ಕುಬಟೂರಿನಲ್ಲಿ ಮಾತನಾಡಿದ ಅವರು, ಸುಗ್ರೀವಾಜ್ಞೆ ಮೂಲಕ ಸರ್ಕಾರ ಮಸೂದೆಗೆ ರಾಜ್ಯಪಾಲರಿಂದ ಅಂಕಿತ ಪಡೆದಿದೆ. ಇದನ್ನು ಬಲವಾಗಿ ವಿರೋಧಿಸುವುದಾಗಿ ಅವರು ಹೇಳಿದರು.
ಯೋಜನೆಗಳು ಬಂಗಾರಪ್ಪ ಕೊಡುಗೆ:
ಮೂಡಿ ಮತ್ತು ಮೂಗೂರು ಏತ ನೀರಾವರಿ ಯೋಜನೆಗಳಿಗೆ ಎಸ್. ಬಂಗಾರಪ್ಪನವರ ಅವಧಿಯಲ್ಲಿಯೇ ರೂಪುರೇಷೆಗಳನ್ನು ತಯಾರಿಸಲಾಗಿದೆ. ಅಂದೇ ಶಂಕುಸ್ಥಾಪನೆಯನ್ನೂ ನೆರವೇರಿಸಲಾಗಿತ್ತು. ತಾವು ಶಾಸಕರಾದ ಅವಧಿಯಲ್ಲಿ ಮತ್ತು ಶಾಸಕರಾಗಿರದ ಸಂದರ್ಭದಲ್ಲಿಯೂ ತಂದೆಯವರ ಕನಸಿನ ಕೂಸಾದ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಪ್ರಯತ್ನ ಪಟ್ಟಿದ್ದೇನೆ. ಎಚ್.ಡಿ. ಕುಮಾರ ಸ್ವಾಮಿ ನೇತೃತ್ವದ ಸರ್ಕಾರ ಬಜೆಟ್‌ನಲ್ಲಿ ಅನುದಾನ ಮೀಸಲಿಟಿತ್ತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಿಂದಿನ ಸರ್ಕಾರದಲ್ಲಿ ಮೀಸಲಿಟ್ಟ ಅನುದಾನವನ್ನು ಬಜೆಟ್‌ನಲ್ಲಿ ಮಂಡಿಸಿದ್ದಾರೆ. ಇದರಲ್ಲಿ ಕ್ಷೇತ್ರದ ಶಾಸಕರ ಕೊಡುಗೆ ಏನೂ ಇಲ್ಲ ಎಂದು ಸಹೋದರನ ವಿರುದ್ಧ ವಾಗ್ದಾಳಿ ನಡೆಸಿದರು.
ಆಡಳಿತ ಯಂತ್ರ ಕುಸಿತ:
ತಾಲ್ಲೂಕಿನಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಈಗಾಗಲೇ ಎರಡೂವರೆ ವರ್ಷದ ಅವಧಿಯಲ್ಲಿ 9 ಜನ ತಹಶೀಲ್ದಾರ್ ಬದಲಾವಣೆಯಾಗಿದ್ದಾರೆ. ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಅಧಿಕಾರಿಗಳು ಮುಂದೆ ಬರುತ್ತಿಲ್ಲ. ಇರುವ ಅಧಿಕಾರಿಗಳು ವರ್ಗಾವಣೆ ಬಯಸುವ ಸ್ಥಿತಿ ಇದೆ. ವಿನಾಃ ಕಾರಣ ಕಚೇರಿಗಳಿಗೆ ಭೇಟಿ ನೀಡುವುದು ಅಧಿಕಾರಿಗಳಿಗೆ ಏಕವಚನದಲ್ಲಿ ಸಂಬೋಧಿಸುವುದು ಶಾಸಕರ ಕಾರ್ಯವಾಗಿದೆ. ಜೊತೆಯಲ್ಲಿ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಶಾಸಕರ ಕೀಳು ಮಟ್ಟದ ಮನಸ್ಥಿತಿಗೆ ಸಾಕ್ಷಿಯಾಗಿದೆ ಎಂದರು.
ಕೊರೊನಾ ಜಾಗೃತಿ ಅವಶ್ಯ:
ಕೊರೊನಾ ಸಮಾಜಕ್ಕೆ ಕಂಟಕವಾಗಿ ಪರಿಣಮಿಸಿದೆ. ಇದನ್ನು ತಡೆಯಲು ವೈಜ್ಞಾನಿಕವಾಗಿ ಪ್ರಯತ್ನಿಸಬೇಕೇ ವಿನಃ, ದೀಪ ಹಚ್ಚುವುದರಿಂದ, ಜಾಗಟೆ ಭಾರಿಸುವುದರಿಂದ ಸೋಂಕನ್ನು ಹೊಡೆದೋಡಿಸಲು ಸಾಧ್ಯವಿಲ್ಲ. ಕಾಯಿಲೆಯನ್ನು ಹರಡದಂತೆ ಹಾಗೂ ನಿವಾರಣೆಗಾಗಿ ಲಸಿಕೆ ಕಂಡುಹಿಡಿಯುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನರೇಂದ್ರ ಮೋದಿಯವನ್ನು ತೆಗಳುತ್ತಿಲ್ಲ. ಅವರ ಪ್ರಧಾನ ಮಂತ್ರಿ ಸ್ಥಾನಕ್ಕೆ ಗೌರವ ನೀಡುತ್ತೇನೆ. ಆದರೆ, ಇಂತಹ ಮೂಢನಂಬಿಕೆಗಳನ್ನು ಬೆಂಬಲಿಸುವುದಿಲ್ಲ ಎಂದರು.