ಶಿವಮೊಗ್ಗ: ಕೊರೊನಾದಿಂದ ಕಲಾವಿದರ ಬದುಕು ಕಷ್ಟಕರವಾಗಿದೆ. ನಮ್ಮ ನೆರವಿಗೂ ಸರ್ಕಾರ ಬರಲಿ ಎಂದು ಆರ್ಕೇಸ್ಟ್ರಾ ಕಲಾವಿದರು ಮನವಿ ಮಾಡಿದ್ದಾರೆ.
ಸಭೆ ಸಮಾರಂಭ, ಮದುವೆ, ಜಾತ್ರೆ, ಅದ್ದೂರಿ ಮೆರವಣಿಗೆಯೇ ಇರಲಿ ಎಲ್ಲಾ ಕಡೆಯಲ್ಲಿ ಬಂದು ರಂಜಿಸುವ ವಾದ್ಯಗೋಷ್ಠಿ ಕಲಾವಿದರ ಬದುಕು ಈಗ ಬೀದಿಗೆ ಬಿದ್ದಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಆರ್ಕೇಸ್ಟ್ರಾಗಳನ್ನು ಹೊಂದಿರುವ ಭದ್ರಾವತಿ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ.
300ಕ್ಕೂ ಹೆಚ್ಚು ಕುಟುಂಬಗಳು ಈ ಆರ್ಕೇಸ್ಟ್ರಾಗಳನ್ನು ನಂಬಿಕೊಂಡು ಬದುಕು ಸಾಗಿಸುತ್ತಿದ್ದವು. ಆದರೆ ಕೊರೊನಾ ಮಹಾಮಾರಿಯಿಂದಾಗಿ ಯಾವುದೇ ಕಾರ್ಯಕ್ರಮಗಳು ಸಭೆ,ಸಮಾರಂಭಗಳು ನಡೆಯುತ್ತಿಲ್ಲ. ಹಾಗಾಗಿ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ನಮ್ಮಂತ ಕಲಾವಿದರನ್ನು ಕಲಾವಿದರಾಗಿ ಪರಿಗಣಿಸಿ ಸಹಾಯ ಮಾಡಬೇಕು ಎಂದು ವಾದ್ಯಗೋಷ್ಠಿ ಕಲಾವಿದರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.