ಶಿವಮೊಗ್ಗ: ಹೂ ಮಳೆ ಸುರಿಸಿ ಗೌರವ ನೀಡಿದರೆ ನಮ್ಮ ಹೊಟ್ಟೆ ತುಂಬುವುದಿಲ್ಲ. ಹಾಗಾಗಿ ಸರ್ಕಾರ ನಮ್ಮ ಕೆಲಸಕ್ಕೆ ತಕ್ಕ ಗೌರವ ಧನವನ್ನೂ ನೀಡಲಿ ಎಂದು ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ರಾಜೇಶ್ವರಿ ಸರ್ಕಾರಕ್ಕೆ ಆಗ್ರಹಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ವಾರಿಯರ್ಸ್ಗಳಾಗಿ ಕೆಲಸ ಮಾಡಿದ ನಮಗೆ ಸಮಾಜದಲ್ಲಿ ಹೂ ಮಳೆ ಸುರಿಸಿ ಗೌರವಿಸಲಾಯಿತು. ಆದರೆ ಸರ್ಕಾರ ಮಾತ್ರ ನಮ್ಮ ನೆರವಿಗೆ ಧಾವಿಸಿಲ್ಲ. ಅನೇಕ ದಿನಗಳಿಂದ ನಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡುತ್ತಿರುವ ಸರ್ಕಾರ ಇಲ್ಲಿಯವರೆಗೂ ನಮ್ಮ ಸಂಕಷ್ಟಕ್ಕೆ ಸ್ಪಂದಿಸಿಲ್ಲ ಎಂದು ದೂರಿದರು.
ನಮ್ಮ ಕುಟುಂಬಗಳು ಸಂಕಷ್ಟದಲ್ಲಿವೆ, ರಾತ್ರಿ ಹಗಲು ಎನ್ನದೇ ಸರ್ಕಾರದ ಅನೇಕ ಯೋಜನೆಗಳ ಸರ್ವೆ ಕಾರ್ಯ ಮಾಡುವ ನಾವು ಕೊರೊನಾ ಸಂದರ್ಭದಲ್ಲಿ ಮನೆ ಮಠ ಮಕ್ಕಳು ಬಿಟ್ಟು ಕೆಲಸ ಮಾಡಿದ್ದೇವೆ. ಆದರೆ ಸರ್ಕಾರ ನಮ್ಮ ಕೆಲಸಕ್ಕೆ ತಕ್ಕ ಗೌರವ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೂಡಲೇ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12,000 ಗೌರವಧನ ಖಾತರಿಪಡಿಸಬೇಕು ಹಾಗೂ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಅಗತ್ಯವಿರುವಷ್ಟು ಸುರಕ್ಷತಾ ಸಾಮಗ್ರಿಗಳನ್ನು ನೀಡಬೇಕು, ಕೊರೊನಾ ವೈರಸ್ಗೆ ತುತ್ತಾದ ಆಶಾ ಕಾರ್ಯಕರ್ತೆಯರಿಗೆ ಪರಿಹಾರ, ಸಂಪೂರ್ಣ ಚಿಕಿತ್ಸೆ ನೀಡಬೇಕು ಎಂದು ಸರ್ಕಾರಕ್ಕೆ ಹತ್ತು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಹಾಗಾಗಿ ಈ ಎಲ್ಲಾ ಬೇಡಿಕೆ ಈಡೆರುವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.