ಶಿವಮೊಗ್ಗ: ಕಾಂಗ್ರೆಸ್ನವರು ಮೊದಲು ಕಾಂಗ್ರೆಸ್ ಜೋಡೋ ಮಾಡಲಿ, ನಂತರ ಭಾರತ್ ಜೋಡೋ ಯಾತ್ರೆ ನಡೆಸಲಿ ಎಂದು ಹೇಳುವ ಮೂಲಕ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಬಗ್ಗೆ ಸಚಿವ ಪ್ರಭು ಚವ್ಹಾಣ್ ವ್ಯಂಗ್ಯವಾಡಿದ್ದಾರೆ. ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಜ್ಞಾನೇಶ್ವರಿ ಗೋ ಶಾಲೆಗೆ ಸಚಿವರು ಇಂದು ಭೇಟಿ ನೀಡಿದರು. ಈ ವೇಳೆ ಗೋ ಮಾತೆಗೆ ಪೂಜೆ ಸಲ್ಲಿಸಿದರು.
ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ: ನಂತರ ಮಾತನಾಡಿದ ಅವರು, ಕಾಂಗ್ರೆಸ್ನವರು ತಮ್ಮ ತಮ್ಮ ನಾಯಕರನ್ನು ಜೋಡಣೆ ಮಾಡಲಿ. ಕಾಂಗ್ರೆಸ್ ವಿರೋಧ ಪಕ್ಷವಾಗಿ ಪೋಸ್ಟರ್ ಬಿಡುಗಡೆ ಮಾಡಿದೆ. ನಾವು ಅಧಿಕಾರದಲ್ಲಿ ಇರುವವರು, ಜನರ ಸೇವೆ ಮಾಡುತ್ತಿದ್ದೇವೆ. ಜೊತೆಗೆ ಗೋವಿನ ಸೇವೆ ಮಾಡುತ್ತಿದ್ದೇವೆ. ಇದರಿಂದ ಮುಂಬರುವ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗೋಹತ್ಯೆ ನಿಷೇಧ ಕಾಯ್ದೆ, ಪ್ರಾಣಿ ಸಹಾಯವಾಣಿ, ಗೋ ಮಾತ ದತ್ತು ಯೋಜನೆ, ಜಿಲ್ಲೆಗೊಂದು ಗೋ ಶಾಲೆ ಯೋಜನೆ ಜಾರಿ ಮಾಡಲಾಗಿದೆ. ನಮ್ಮ ಉದ್ದೇಶ ಕಸಾಯಿ ಖಾನೆಗಳಿಗೆ ಜಾನುವಾರುಗಳು ಹೋಗುವುದನ್ನು ತಪ್ಪಿಸುವುದು. ಗೋ ಮಾತೆಯ ಸಂತತಿ ಉಳಿಸುವುದು ಎಂದರು.
ಜಾನುವಾರುಗಳಿಗೆ ಚರ್ಮಗಂಟು ರೋಗ: ರಾಜ್ಯದಲಿ 43 ಸಾವಿರ ಜಾನುವಾರುಗಳಿಗೆ ಚರ್ಮಗಂಟು ರೋಗ ತಗುಲಿತ್ತು. ಈಗ ಎಲ್ಲ ಕಡೆ ಲಸಿಕೆ ಕಳುಹಿಸಲಾಗಿದೆ. ರೋಗ ಹತೋಟಿಯಲ್ಲಿದೆ. ನಮ್ಮಲ್ಲಿ ಲಸಿಕೆ ಹಾಗೂ ಔಷಧಕ್ಕೆ ಕೊರತೆ ಇಲ್ಲ.ನಮ್ಮ ಇಲಾಖೆಯ ರಾಯಭಾರಿಯಾಗಿ ನಟ ಸುದೀಪ್ ನಿನ್ನೆ 31 ಗೋವುಗಳನ್ನು ದತ್ತು ತೆಗೆದುಕೊಂಡರು. ಅದೇ ರೀತಿ ಅನೇಕರು ಸಹ ಪೋನ್ ಮಾಡಿ ತಾವು ಸಹ ದತ್ತು ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಸಚಿವರು ಹೇಳಿದರು.
400 ವೈದ್ಯರ ನೇಮಕಕ್ಕೆ ಸಿದ್ಧತೆ: ಸರ್ಕಾರಿ ನೌಕರರು ಸಹ ಗೋಶಾಲೆಗಳ ನಿರ್ವಹಣೆಗೆ 100 ಕೋಟಿ ರೂ. ದೇಣಿಗೆ ನೀಡುವುದಾಗಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ತಿಳಿಸಿದ್ದಾರೆ. 400 ವೈದ್ಯರ ನೇಮಕಕ್ಕೆ ಸಿದ್ಧತೆ ನಡೆದಿದೆ. ಆದರೆ, ಕೆಲವರು ಕೋರ್ಟ್ಗೆ ಹೋಗಿದ್ದಾರೆ. ಆ ಕೇಸ್ ನಡೆಯುತ್ತಿದೆ. ಇನ್ನೂ ಡಿಪ್ಲೋಮಾ ಆದ 250 ಜನರನ್ನು ನೇಮಕ ಮಾಡಿಕೊಳ್ಳಲು ಸಿಎಂ ಸೂಚಿಸಿದ್ದಾರೆ.
ಇದನ್ನೂ ಓದಿ: ಯತ್ನಾಳ ಎದುರೆ ಮಾಜಿ ಸಿಎಂ ಬಿಎಸ್ವೈ ಗುಣಗಾನ ಮಾಡಿದ ಸಚಿವ ಪ್ರಭು ಚವ್ಹಾಣ್
ಪ್ರತಿ ಜಿಲ್ಲೆಯಲ್ಲಿಯೂ ಸಹ ಸರ್ಕಾರಿ ಗೋ ಶಾಲೆ ನಿರ್ಮಾಣ ಮಾಡಲಾಗುವುದು. ಡಿಸೆಂಬರ್ ಅಂತ್ಯಕ್ಕೆ 30 ಗೋ ಶಾಲೆಗಳು ಪ್ರಾರಂಭವಾಗಲಿವೆ. ಗೋ ಶಾಲೆಗಳ ಗೋವುಗಳಿಗೆ ಬೇಕಾದ ಅನುದಾನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದರು.