ಶಿವಮೊಗ್ಗ: ಕೊರೊನಾ ವೈರಸ್‌ನಂತೆಯೇ ಮಂಗನ ಕಾಯಿಲೆಯೂ ಅಪಾಯಕಾರಿ. ಹಾಗಾಗಿ ಸರ್ಕಾರ ಮಂಗನ ಕಾಯಿಲೆ ಬಗ್ಗೆ ನಿರ್ಲಕ್ಷ್ಯ ತೋರಬಾರದು ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಲಹೆ ನೀಡಿದರು. ಇದೇ ವೇಳೆ ಶಾಸಕ ಹರತಾಳು ಹಾಲಪ್ಪ ಅವರನ್ನೂ ತರಾಟೆಗೆ ತೆಗೆದುಕೊಂಡರು.
ಈ ಹಿಂದೆ ಸೊರಬ ಶಾಸಕರಾಗಿದ್ದ ಹರತಾಳು ಹಾಲಪ್ಪ ಕಳೆದ ಚುನಾವಣೆಯಲ್ಲಿ ಸಾಗರಕ್ಕೆ ನೆಗೆದರು. ಬರುವಾಗ ಹಾಲಪ್ಪ ಒಬ್ಬರೇ ಬರಲಿಲ್ಲ, ಜೊತೆಗೆ ಮಂಗನಕಾಯಿಲೆಯನ್ನೂ ತಂದರು ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವ್ಯಂಗ್ಯವಾಡಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಬಿ ವೈ ರಾಘವೇಂದ್ರ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಪಾರ್ಕ್ ಮಾಡುತ್ತೇನೆ ಎನ್ನುತ್ತಿದ್ದಾರೆ. ಕೂಡಲೇ ಮಂಗನಪಾರ್ಕ್ ನಿರ್ಮಾಣ ಮಾಡಿ ಶಾಸಕ ಹರತಾಳು ಹಾಲಪ್ಪ ಅವರನ್ನು ಅಲ್ಲಿಗೆ ಬಿಡಬೇಕು. ಜತೆಗೆ ಹಾಲಪ್ಪ ಅವರನ್ನೇ ಮಂಗನಪಾರ್ಕ್‌ನ ಇನ್ಚಾರ್ಜ್ ಮಾಡಬೇಕು ಎಂದರು. ಇಷ್ಟಕ್ಕೆ ಸುಮ್ಮನಾಗದ ಅವರು, ಸಾಗರದಲ್ಲಿ ಭ್ರಷ್ಟಾಚಾರದ ಪಿತಾಮಹಾ ಹರತಾಳು ಹಾಲಪ್ಪ ಅಂತಾ ಆರೋಪಿಸಿದರು. ಗುತ್ತಿಗೆದಾರರ ಸಭೆ ಕರೆದು ಹತ್ತು ಪರ್ಸೆಂಟ್ ಕಮಿಷನ್ ಕೊಟ್ಟರೆ ಮಾತ್ರ ಕಾಮಗಾರಿ ನಡೆಸಲು ಅನುಮತಿ ಕೊಡೋದಾಗಿ ಹೇಳುವ ಇಂತಹ ಭ್ರಷ್ಟಾಚಾರಿಯನ್ನು ಎಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದು ಆರೋಪಿಸಿದರು.