ಶಿವಮೊಗ್ಗ: ಸರ್ಕಾರ ಯಾವುದೇ ಯೋಜನೆ ಜಾರಿಗೆ ತಂದರೂ ಕೂಡ ಅದನ್ನು ಅನುಷ್ಠಾನಗೊಳಿಸುವಲ್ಲಿ, ಜನರಿಗೆ ಸೇವೆ ತಲುಪಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಮಹತ್ವದ್ದು. ಆದ್ರೆ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಸೂಕ್ತ ಪ್ರಮಾಣದ ನೌಕರರು ಇಲ್ಲದೇ ಹೋದರೆ ಅಲ್ಲಿನ ಕಥೆಯೇನು. ನಿರ್ದಿಷ್ಟ ಸಮಯದಲ್ಲಾಗಬೇಕಾದ ಕೆಲಸಗಳು ಆಮೆಗತಿಯಲ್ಲಿ ಸಾಗುತ್ತವೆ. ಸಿಎಂ ತವರು ಜಿಲ್ಲೆಯಲ್ಲೂ ಇದೇ ರೀತಿ ಆಗ್ತಿದೆ.
ಸರ್ಕಾರ - ಜನರ ನಡುವೆ ಕೊಂಡಿಯಾಗಿ ಸರ್ಕಾರಿ ನೌಕರರು ಕೆಲಸ ಮಾಡಬೇಕಿದೆ. ಆದರೆ ಸರ್ಕಾರಿ ಕಚೇರಿಗಳಲ್ಲಿ ಹುದ್ದೆಗಳು ಖಾಲಿ ಇವೆ. ಸೂಕ್ತ ಪ್ರಮಾಣದ ನೌಕರರ ಕೊರತೆಯಿದೆ. ಹಾಗಾಗಿ ಸರ್ಕಾರ ತನ್ನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಹೊರಗುತ್ತಿಗೆಯ ಮೂಲಕ ನೌಕರರನ್ನು ತೆಗೆದುಕೊಂಡು ಕೆಲಸ ನಡೆಸುತ್ತಿದೆ.
ಶೇ. 30 ರಿಂದ 40 ರಷ್ಟು ನೌಕರರ ಸಮಸ್ಯೆ:
ಜಿಲ್ಲೆಯ ಭದ್ರಾವತಿ ಹಾಗೂ ಸಾಗರ ಪಟ್ಟಣದಲ್ಲಿ ನಗರಸಭೆಯಿದ್ದು, ಶೇ. 30 ರಿಂದ 40 ರಷ್ಟು ನೌಕರರ ಸಮಸ್ಯೆ ಎದುರಿಸುವಂತಾಗಿದೆ. ಇದರಿಂದ ಸರ್ಕಾರದ ಕೆಲಸವನ್ನು ಸುಗಮವಾಗಿ ನಡೆಸಲು ಆಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಭದ್ರಾವತಿ ನಗರಸಭೆ:
ಭದ್ರಾವತಿ ನಗರಸಭೆಯಲ್ಲಿ ಒಟ್ಟು 418 ಮಂಜೂರಾತಿ ಹುದ್ದೆಗಳಿವೆ. ಇದರಲ್ಲಿ 183 ಹುದ್ದೆಯಲ್ಲಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. 213 ಹುದ್ದೆಗಳು ಖಾಲಿ ಇವೆ. ಇದರಲ್ಲಿ 178 ಕ್ಲಾಸ್ ಡಿ ಮತ್ತು ಸಿ ಹಾಗೂ ಕ್ಲಾಸ್ ಡಿ ಹುದ್ದೆಯಲ್ಲಿ ಬಿ 1 ಹುದ್ದೆ ಖಾಲಿ ಇವೆ. ನೇರ ನೇಮಕಾತಿಯಲ್ಲಿ ಶೇ. 50 ರಷ್ಟು ನೌಕರರನ್ನು ತೆಗೆದುಕೊಳ್ಳಬೇಕಿದೆ. ನೇರ ಸಂಬಳ ನೀಡಿಕೆಯಡಿ 71 ಜನರು ಕೆಲಸ ನಿರ್ವಹಿಸುತ್ತಿದ್ದಾರೆ. ಉಳಿದ ಸಿಬ್ಬಂದಿಯನ್ನು ಹೊರಗುತ್ತಿಗೆಯ ಮೂಲಕ ನೇಮಕಾತಿ ಮಾಡಿಕೊಳ್ಳಲಾಗಿದೆ. ಪೌರ ಕಾರ್ಮಿಕರು ಬಿಟ್ಟು ವಾಟರ್ ಲೈನ್ ಮ್ಯಾನ್, ಬಿಲ್ ಕಲೆಕ್ಟರ್, ಗ್ರೂಪ್ ಡಿ ನೌಕರರು ಇದ್ದಾರೆ. ಭದ್ರಾವತಿಗೆ ಪೌರ ಕಾರ್ಮಿಕರ ಕೊರತೆ ಇದ್ದು, 418 ಹುದ್ದೆಗಳಿವೆ. 183 ನೇರ ನೇಮಕಾತಿಯಲ್ಲಿದ್ದಾರೆ. ಉಳಿದ 233 ಹುದ್ದೆಗಳು ಖಾಲಿಯಾಗಿವೆ. 162 ಜನ ಪೌರ ಕಾರ್ಮಿಕರು ಹೊರ ಗುತ್ತಿಗೆಯಲ್ಲಿದ್ದಾರೆ. ಸದ್ಯ ಯಾವುದೇ ಸಮಸ್ಯೆ ಇಲ್ಲದೇ ಹೋದ್ರು, ಸಹ ನೇಮಕಾತಿ ಮಾಡಿಕೊಂಡ್ರೆ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬಹುದಾಗಿದೆ.
ಸಾಗರ ನಗರಸಭೆ:
ಸಾಗರ ನಗರಸಭೆಯಲ್ಲಿ ಒಟ್ಟು 336 ಹುದ್ದೆಗಳಿವೆ. ಈ ಪೈಕಿ 196 ಹುದ್ದೆಗಳಿಗೆ ಇತ್ತೀಚೆಗೆ ನೇಮಕವಾಗಿದೆ. ಇನ್ನೂ 40 ಹುದ್ದೆಗಳನ್ನು ನೇಮಕಾತಿ ಮಾಡಬೇಕಿದೆ ಎಂಬ ಮಾಹಿತಿಯನ್ನು ಆಯುಕ್ತ ನಾಗಪ್ಪ ನೀಡಿದ್ದಾರೆ.
ಓದಿ: ಸಿಬ್ಬಂದಿ ಕೊರತೆ: ಆಮೆಗತಿಯಲ್ಲಿ ಸಾಗುತ್ತಿವೆ ಹು-ಧಾ ಮಹಾನಗರ ಪಾಲಿಕೆ ಕಾರ್ಯಗಳು
ಸರ್ಕಾರಕ್ಕೆ ಖಾಲಿ ಇರುವ ಹುದ್ದೆಗಳ ಮಾಹಿತಿ ಪ್ರತಿ ತಿಂಗಳು ಹೋಗುತ್ತಿರುತ್ತದೆ ಎನ್ನುತ್ತಾರೆ ಭದ್ರಾವತಿ ನಗರಸಭೆ ಆಯುಕ್ತ ಮನೋಹರ್. ಸದ್ಯ ಭದ್ರಾವತಿಯಲ್ಲಿ ನೌಕರರ ಸಮಸ್ಯೆ ಇದ್ದರೂ ಸಹ ಆಯುಕ್ತರು ಇರುವ ಸಿಬ್ಬಂದಿಯಲ್ಲಿಯೇ ಉತ್ತಮ ಸೇವೆ ನೀಡುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು.