ಶಿವಮೊಗ್ಗ: ರಾಜ್ಯ ರಸ್ತೆ ಸಾರಿಗೆ ನಿಗಮ 2018ರಲ್ಲಿ ಚಾಲಕ ಮತ್ತು ನಿರ್ವಾಹಕ, ತಾಂತ್ರಿಕ ವರ್ಗ ಹಾಗೂ ಭದ್ರತಾ ರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. 2018ರಲ್ಲಿ 200 ಭದ್ರತಾ ರಕ್ಷಕ ಹಾಗೂ 726 ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಅರ್ಜಿ ಕರೆದು, ಪರೀಕ್ಷೆಯನ್ನೂ ನಡೆಸಿದೆ. ಆದರೆ ಇದುವರೆಗೂ ಯಾವ ಪರೀಕ್ಷಾರ್ಥಿಗಳಿಗೂ ಅಂತಿಮ ಹಂತದ ಸಂದರ್ಶನಕ್ಕೆ ಕರೆಯದೇ ಆಕಾಂಕ್ಷಿಗಳನ್ನು ಚಿಂತೆಗೀಡು ಮಾಡಿದೆ.
ಪರೀಕ್ಷೆ ಬರೆಯುವಾಗ ನಮಗಿದ್ದ ವಯಸ್ಸಿನಲ್ಲಿ ಹುಮ್ಮಸ್ಸಿತ್ತು. ಆಗ ದೈಹಿಕ ಪರೀಕ್ಷೆಗೆ ನಮ್ಮ ದೇಹ ಹೊಂದಿಕೊಳ್ಳುತ್ತಿತ್ತು. ಆದರೆ ಈಗ ವಯಸ್ಸು ಹೆಚ್ಚಾಗುತ್ತಿದೆ. ಈಗ ದೈಹಿಕ ಪರೀಕ್ಷೆ ನಡೆಸಿದರೆ ನಮ್ಮ ದೇಹ ಹೊಂದಿಕೊಳ್ಳುವ ಸಾಧ್ಯತೆ ಕಡಿಮೆ. ಲಿಖಿತ ಪರೀಕ್ಷೆ ನಡೆಸಿದ ನಂತರದಲ್ಲಿ ದೈಹಿಕ ಪರೀಕ್ಷೆ ನಡೆಸಿದ್ದರೆ ಅನುಕೂಲಕರವಾಗುತ್ತಿತ್ತು ಎಂದು ಪರೀಕ್ಷಾರ್ಥಿಗಳು ಹೇಳಿದ್ದಾರೆ.
ಕಚೇರಿಗೆ ಹೋಗಿ ದೈಹಿಕ ಪರೀಕ್ಷೆಯ ಬಗ್ಗೆ ವಿಚಾರಿಸಿದರೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಕೋವಿಡ್ನಿಂದ ಎಲ್ಲವನ್ನೂ ತಡೆಹಿಡಿಯಲಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ, ಕೋವಿಡ್ ಮುಗಿದು ಎರಡು ವರ್ಷಗಳಿಂದ ಎಲ್ಲ ಕೆಲಸಗಳು ಸರ್ಕಾರದ ಮಟ್ಟದಲ್ಲಿ ನಡೆಯುತ್ತಿವೆ. ಇದರಿಂದ ನಮ್ಮ ಪರೀಕ್ಷೆಯನ್ನು ಅದಷ್ಟು ಬೇಗ ನಡೆಸಬೇಕು. ಕೆಎಸ್ಆರ್ಟಿಸಿಯಲ್ಲಿ ಸಿಬ್ಬಂದಿ ಕೊರತೆ ಇರುವ ಕಾರಣ ನಿವೃತ್ತರಾದವರನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಇದರಿಂದ ನಮ್ಮಂತಹ ಯುವಕರಿಗೆ ಅನ್ಯಾಯ ಮಾಡಿದಂತೆ ಆಗುತ್ತಿದೆ. ಸಾರಿಗೆ ಸಚಿವರು ಇತ್ತ ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸಿಎಂ ಕೋಟಾದಲ್ಲಿ ಅಂಧ ಮಹಿಳೆಗೆ ಸಿಕ್ತು ನಿವೇಶನ: ಮನೆ ಕಟ್ಟಲು ಬಿಡುಗಡೆಯಾಗದ ಅನುದಾನ