ಶಿವಮೊಗ್ಗ: ಸೂರ್ಯ, ಚಂದ್ರರು ಇರುವುದು ಎಷ್ಟು ಸತ್ಯವೋ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗುವುದು ಅಷ್ಟೇ ಸತ್ಯ ಎಂದು ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಮುಖಂಡ ಕೆ ಎಸ್ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದ ದೇವಂಗಿ ರತ್ನಾಕರ್ ಬಡಾವಣೆಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಜನರ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಸೂರ್ಯ, ಚಂದ್ರರು ಇರುವ ತನಕ ಕಾಂಗ್ರೆಸ್ ಪಕ್ಷ ತೊರೆದಿದ್ದ 17 ಜನ ಶಾಸಕರನ್ನು ಮತ್ತೆ ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳಲ್ಲ ಎಂದು ಸಿದ್ದರಾಮಯ್ಯನವರು ಹೇಳಿದ್ದರು. ಈಗ ಅವರನ್ನು ಪಕ್ಷಕ್ಕೆ ಕರೆತರಲು ದುಂಬಾಲು ಬಿದ್ದಿದ್ದಾರೆ ಎಂದು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು.
ನನ್ನ ಮಗ ಕಾಂತೇಶ್ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾನೆ. ಹಾವೇರಿ ಕ್ಷೇತ್ರದ ಸ್ವಾಮಿಜೀಗಳನ್ನು, ವಿವಿಧ ಮುಖಂಡರುಗಳನ್ನು ಭೇಟಿ ಮಾಡುತ್ತಿದ್ದಾನೆ. ಮಾಜಿ ಸಚಿವ ಬಿ ಸಿ ಪಾಟೀಲರು ನನ್ನ ಆತ್ಮೀಯ ಸ್ನೇಹಿತರು, ಅವರ ಜೊತೆ ಕುಳಿತುಕೊಂಡು ಮಾತನಾಡುತ್ತೇನೆ. ಕಾಂತೇಶ್ ಏನೂ ಆಕಾಶದಿಂದ ಇಳಿದು ಬಂದಿಲ್ಲ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರನ್ನು ಗೆಲ್ಲಿಸುತ್ತೇವೆ ಎಂದು ಹೇಳಿದರು.
ವಿಶ್ವದ ಮುಂದೆ ಭಾರತ ಉನ್ನತ ಸ್ಥಾನಕ್ಕೆ ಹೋಗಿದೆ. ಇಸ್ರೋದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಿದ್ದರು. ವಿಜ್ಞಾನಿಗಳಿಗೆ ಪ್ರಧಾನಿ ಮನತುಂಬಿ ಅಭಿನಂದನೆ ಸಲ್ಲಿಸಿದ್ದಾರೆ. ಹೊಗಳಿಕೆ ಅಲ್ಲ, ಅವರು ಮಾಡಿರುವಂತಹ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಹೋಗಿದ್ದಾರೆ. ಅವರ ಭಾಷಣ ನಮಗೆ ಇಂದು ತುಂಬ ಸಮಾಧಾನ ತಂದಿದೆ. ಆ. 23ರಂದು ಚಂದ್ರನ ಮೇಲೆ ಕಾಲು ಇಟ್ಟ ದಿನಕ್ಕೆ ರಾಷ್ಟ್ರೀಯ ಬಾಹ್ಯಕಾಶ ದಿನ ಎಂದು ಘೋಷಿಸಿದ್ದಾರೆ. ನಮ್ಮ ದೇಶದ ವಿಜ್ಞಾನಿಗಳು ನಮ್ಮ ದೇಶದ ಸ್ಥಾನವನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಭಾರತೀಯ ಸಂಸ್ಕೃತಿ, ಧರ್ಮ ಇಂದು ವಿಶ್ವವನ್ನು ಭಾರತದತ್ತ ಆಕರ್ಷಿಸುತ್ತಿದೆ. ಈಗ ವಿಜ್ಞಾನಿಗಳು ಸಹ ಪ್ರಪಂಚದ ಗಮನ ಸೆಳೆಯುತ್ತಿದ್ದಾರೆ ಎಂದರು.
ಇಸ್ರೋ ಸಾಧನೆಯನ್ನು ನಮ್ಮ ಸಾಧನೆ ಅಂತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೇರಿದಂತೆ ಯಾರೂ ಸಹ ಹೇಳಿಲ್ಲ, ಇದು ವಿಜ್ಞಾನಿಗಳಿಗೆ ಸಲ್ಲಬೇಕಾದ ಗೌರವ. ವಿಜ್ಞಾನಿಗಳಿಂದ ಭಾರತದ ಕೀರ್ತಿ ಪತಾಕೆಯು ಪ್ರಪಂಚದ ಮುಂದೆ ಉನ್ನತ ಮಟ್ಟಕ್ಕೆ ಹೋಗಿದೆ ಎಂದು ಸಾಮಾನ್ಯ ಕಾರ್ಯಕರ್ತ ನಾನೇ ಹೇಳುತ್ತಿದ್ದೆನೆ. ಮೋದಿ ಅವರು ಸಹ ಹಾಗೆ ಎಲ್ಲೂ ಹೇಳಿಲ್ಲ. ರಾಜಕಾರಣದಲ್ಲಿ ಹುಳುಕು ಹಡುಕುವಂತಹ ಪ್ರಯತ್ನವನ್ನು ನಡೆಸಿದರೆ, ಹುಡುಕುತ್ತಾ ಹೋಗಬಹುದು ಎಂದು ಪ್ರತಿಪಕ್ಷಗಳ ಟೀಕೆಗೆ ಈಶ್ವರಪ್ಪ ತಿರುಗೇಟು ನೀಡಿದರು.
ಇಂದು ಬೆಂಗಳೂರಿಗ ಬಂದ ಪ್ರಧಾನಮಂತ್ರಿ ಅವರು ರಾಜ್ಯ ಬಿಜೆಪಿ ನಾಯಕರನ್ನು ಭೇಟಿ ಮಾಡಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಇದು ಪ್ರಧಾನಿ ಕಚೇರಿಯಲ್ಲಿ ಆಗಿರುವ ತೀರ್ಮಾನವಾಗಿದೆ. ಅವರು ಹೇಗೆ ತೀರ್ಮಾನ ತೆಗೆದುಕೊಂಡಿರುತ್ತಾರೂ ಅದೇ ರೀತಿ ಆಗಿರುತ್ತದೆ. ಪ್ರಧಾನಿಯನ್ನು ಭೇಟಿ ಮಾಡಲು ರಾಜ್ಯಪಾಲರು, ಸಿಎಂಗೆ ಅವಕಾಶ ನೀಡಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಪ್ರಧಾನಿ ಕಚೇರಿ ಸೂಚನೆ ಗೌರವಿಸಿದ್ದೇವೆ: ಪ್ರೋಟೋಕಾಲ್ ವಿಚಾರವಾಗಿ ಡಿಕೆಶಿ ಸ್ಪಷ್ಟನೆ.. ಅಶೋಕ್ಗೆ ತಿರುಗೇಟು