ಶಿವಮೊಗ್ಗ: ಸ್ವಯಂ ಸೇವಕರ ಪಾದದ ಧೂಳಿಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರಲ್ಲ. ಗಲಭೆಗೆ ಪರಿವಾರದ ಬಿಕ್ಕಟ್ಟು ಕಾರಣ ಎಂದು ಹೇಳುವ ಸಿದ್ದರಾಮಯ್ಯ ಅವರಿಗೆ ನಾಚಿಕೆ, ಮಾನ ಮರ್ಯಾದೆ ಇದೆಯೇ ಎಂದು ಮಾಜಿ ಸಚಿವ ಕೆ.ಎಸ್ .ಈಶ್ವರಪ್ಪ ಹರಿಹಾಯ್ದಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಸಂಘ ಪರಿವಾರದ ಸ್ವಯಂ ಸೇವಕರ ಬಗ್ಗೆ ಸ್ವಲ್ಪವೂ ತಿಳಿದಿಲ್ಲ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದು ಮತ್ತು ಅವರ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ್ದು. ಆರ್ಎಸ್ಎಸ್ ದೇಶದ ಆಶಾಕಿರಣ. ಸಿದ್ದರಾಮಯ್ಯ ತೆವಲು ತೀರಿಸಿಕೊಳ್ಳಲು ಈ ರೀತಿಯ ಹೇಳಿಕೆ ನೀಡಿದ್ದಾರೆ. ಕೂಡಲೇ ಅವರು ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಆರ್ಎಸ್ಎಸ್ ಬಗ್ಗೆ ಸಿದ್ದರಾಮಯ್ಯ ತಿಳಿದುಕೊಳ್ಳಬೇಕು. ಶಾಖೆಗೆ ಎರಡು ದಿನಗಳ ಕಾಲ ಬಂದು ತಿಳಿದುಕೊಂಡರೆ, ನಾಲಿಗೆ ಇಷ್ಟು ಉದ್ದ ಬಿಡುವುದಿಲ್ಲ. ಅವರು ಬಂದರೆ ನಾನೇ ಶಾಖೆಗೆ ಕರೆದುಕೊಂಡು ಹೋಗುತ್ತೇನೆ. ಸಿದ್ದರಾಮಯ್ಯ ತಮ್ಮ ನಾಲಿಗೆಯನ್ನು ತೊಳೆದುಕೊಳ್ಳಲಿ. ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ, ಪಾಕಿಸ್ತಾನ ಮತ್ತೆ ಭಾರತದ ಸುದ್ದಿಗೆ ಬರದಂತೆ ಮಾಡಿದ್ದು ಸಂಘ ಪರಿವಾರದ ನರೇಂದ್ರ ಮೋದಿ. ದೇಶದ ಮೇಲೆ ದಾಳಿಗಳಾದಾಗ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಪರಿವಾರದ ಸ್ವಯಂ ಸೇವಕರು ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಆರ್ಎಸ್ಎಸ್ನಲ್ಲಿ ಗುಂಪುಗಳಿಲ್ಲ: ಒಕ್ಕಲಿಗರು ಕೆಂಪೇಗೌಡನ ರಕ್ತ ಹಂಚಿಕೊಂಡು ಹುಟ್ಟಿದ್ದಾರೆ, ಕುರುಬರು ಸಂಗೊಳ್ಳಿ ರಾಯಣ್ಣನ ರಕ್ತ ಹಂಚಿಕೊಂಡು ಹುಟ್ಟಿದವರು. ನಿಮ್ಮ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಗುಂಪು, ಡಿ.ಕೆ.ಶಿವಕುಮಾರ ಗುಂಪು ಇದೆ. ಆದರೆ, ಆರ್ಎಸ್ಎಸ್ನಲ್ಲಿ ಗುಂಪುಗಳಿಲ್ಲ. ಸಿದ್ದರಾಮಯ್ಯ ಕುಡುಕರ ರೀತಿ ಮಾತನಾಡುವುದು ಸರಿಯಲ್ಲ. ಹರ್ಷ ಹಾಗೂ ಪ್ರವೀಣ್ನನ್ನು ನಾವು ಕಳೆದುಕೊಂಡು ನೋವಿನಲ್ಲಿದ್ದೇವೆ. ಕೊಲೆ ಮಾಡಿದ ದೇಶ ದ್ರೋಹಿಗಳನ್ನು ಘಟನೆ ನಡೆದು 24 ಗಂಟೆಯೊಳಗಾಗಿ ಬಂಧಿಸಿದ್ದೇವೆ. ನಿಮ್ಮ ಸರ್ಕಾರದ ಅವಧಿಯಲ್ಲಿ 32 ಜನ ಹಿಂದುಗಳ ಹತ್ಯೆಯಾಯಿತು. ಆಗ ಎಷ್ಟು ಬಾರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೀರಿ ಸ್ಪಷ್ಟಪಡಿಸಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ: ತಮ್ಮದೇ ಪಕ್ಷದಲ್ಲಿರುವ ಮಾಹಿತಿ ಪಡೆಯಲಾಗದ ಗೃಹ ಸಚಿವರು ಜನರ ರಕ್ಷಣೆ ಮಾಡಬಲ್ಲರಾ?: ಪ್ರಿಯಾಂಕ್ ಕಿಡಿ
ನಳೀನ್ ಕುಮಾರ್ ಕಟೀಲ್ ಬಂದಾಕ್ಷಣ ಸಿದ್ದರಾಮಯ್ಯ ಸೋತರು ಹಾಗೂ ಅವರ ಸರ್ಕಾರ ಹೋಯಿತು. ಇದೇ ಸಿಟ್ಟಿಗೆ ಇದೀಗ ಸಿದ್ದರಾಮಯ್ಯ ನಳೀನ್ ಕುಮಾರ್ ಕಟೀಲರನ್ನು ವಿಚಾರಣೆಗೊಳಪಡಿಸಿ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರು ರಾಜಕಾರಣದ ಇತಿ-ಮಿತಿಯನ್ನು ಮೀರಿ ನಾಲಿಗೆ ಚಾಚುತಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಒಡೆದಿರುವುದು ಅಧಿಕಾರಕ್ಕೋಸ್ಕರವೇ ಎಂದು ಈಶ್ವರಪ್ಪ ಪ್ರಶ್ನಿಸಿದರು.
ರಮೇಶ್ ಕುಮಾರ್ ಗೂಂಡಾ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಇದೇ ಕಾರಣದಿಂದಲೇ ರಮೇಶ್ ಕುಮಾರ್ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ರಮೇಶ್ ಕುಮಾರ್ ಅವರನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಈಶ್ವರಪ್ಪ ಹೇಳಿದರು.
ರಾಜೀನಾಮೆ ವಾಪಸ್ ಪಡೆದಿದ್ದಾರೆ: ಯುವ ಮೋರ್ಚಾದ ಕಾರ್ಯಕರ್ತರ ರಾಜೀನಾಮೆ ವಿಚಾರವಾಗಿ ಮಾತನಾಡಿದ ಅವರು, ರಾಷ್ಟ್ರದ್ರೋಹಿ ಮುಸಲ್ಮಾನರ ಮೇಲಿನ ಸಿಟ್ಟಿನಿಂದ ಬಿಜೆಪಿ ಯುವ ಕಾರ್ಯಕರ್ತರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಅವರಿಗೆ ಮನವರಿಕೆ ಮಾಡಿಕೊಟ್ಟ ಬಳಿಕ ತಮ್ಮ ರಾಜೀನಾಮೆ ವಾಪಸ್ ಪಡೆದಿದ್ದಾರೆ ಎಂದು ತಿಳಿಸಿದರು.
ಇದೀಗ ಹಿಂದೂ ಸಮಾಜ ಜಾಗೃತವಾಗಿದೆ. ಇದೇ ಕಾರಣಕ್ಕೆ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಜನ ಆಕ್ರೋಶಗೊಳ್ಳುತ್ತಾರೆ. ಭಾರತದಲ್ಲಿ ಹಿಂದುತ್ವ ಜಾಗೃತವಾಗಿದ್ದರಿಂದಲೇ ಭಾರತ ಇಂದು ವಿಶ್ವಗುರುವಾಗಿರುವುದು. ಪಿಎಫ್ಐ ಹಾಗೂ ಎಸ್ಡಿಪಿಐ ನಿಷೇಧ ಮಾಡಬೇಕೆಂದು ಎಬಿವಿಪಿ ಕಾರ್ಯಕರ್ತರು ಹೋರಾಟ ಮಾಡುತ್ತಿದ್ದಾರೆ. ಬಿಜೆಪಿಯ ನಿಲುವು ಸಹ ಇದೇ ಆಗಿದೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದರು.
ಇದನ್ನೂ ಓದಿ: ರಾಜಕೀಯಕ್ಕೋಸ್ಕರ ಕೊಲೆಗಳು ನಡೆಯುತ್ತಿವೆ, ಇವುಗಳನ್ನು ಹತೋಟಿಗೆ ತರಬೇಕು: ಸಚಿವ ಮಾಧುಸ್ವಾಮಿ