ಶಿವಮೊಗ್ಗ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನಷ್ಟು ವರ್ಷಗಳ ಕಾಲ ಬದುಕಬೇಕು. ಅವರು ಬದುಕಿದ್ದು ಹಿಂದುಳಿದವರ ಪರ ಹೋರಾಟ ಮಾಡಲಿ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ನನ್ನ ಹೆಣ ಕೂಡ ಬಿಜೆಪಿಗೆ ಹೋಗಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದರು. ನನ್ನ ಆಸೆ ಅವರು ಬೇಗ ಸಾಯಬಾರದು. ಬಹಳ ವರ್ಷ ಬದುಕಿರಬೇಕು. ಜನರ ಪರವಾಗಿ ಹಿಂದುಳಿದವರ ಪರವಾಗಿ ಹೋರಾಟ ಮಾಡಲಿ. ಯಾವ ಕಾರಣಕ್ಕೂ ನೀವು ಸಾಯೋದು ಬೇಡ. ನಿಮ್ಮ ಹೆಣ ಬಿಜೆಪಿ ಕಚೇರಿಗೆ ಬರೋದು ಬೇಡ ಎಂದು ಹೇಳಿದರು.
ಆದರೆ ನೀವು ಮೊದಲನೇ ಬಾರಿ ಸರ್ಕಾರಿ ಕಾರು ಹತ್ತಿದ್ದು ಬಿಜೆಪಿಯ ಬೆಂಬಲದ ಸರ್ಕಾರದಿಂದ. ಆಗ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ರಿ. ಆ ಸಂದರ್ಭದಲ್ಲಿ ಬಿಜೆಪಿಯ 19 ಜನ ಶಾಸಕರು ಯಾವುದೇ ಷರತ್ತು ಇಲ್ಲದೆ ಬೆಂಬಲ ನೀಡಿದ್ದರು. ಕಾಂಗ್ರೆಸ್ಸೇತರ ಸರ್ಕಾರ ಕರ್ನಾಟಕದಲ್ಲಿ ಬರಬೇಕೆಂದು ಎಂದು ಬೆಂಬಲ ನೀಡಿದ್ದರಿಂದ ನೀವು ಮೊದಲನೇ ಬಾರಿ ಸರ್ಕಾರದ ಕಾರು ಹತ್ತಿದ್ರಿ. ಆಗ ಭಾರತೀಯ ಜನತಾ ಪಾರ್ಟಿ ಕೋಮುವಾದಿ ಪಕ್ಷ ಎಂದು ಗೊತ್ತಾಗ್ಲಿಲ್ವಾ ಎಂದು ಪ್ರಶ್ನಿಸಿದರು.
ಸರ್ಕಾರಿ ಕಾರು ಹತ್ತ ಬೇಕಾದರೆ ಆ ಮಜಾ ಮಾತ್ರ ಬೇಕಿತ್ತಾ ನಿಮಗೆ. ಬಿಜೆಪಿ ಬೆಂಬಲ ತಗೊಂಡು ಸಮಾಜವಾದಿ ಆದವರಿಗೆ ಬಿಜೆಪಿ ಕೋಮುವಾದಿ ಎಂದು ಗೊತ್ತಾಗಿದ್ದು ಯಾವಾಗ ?. ನಿಮ್ಮ ನಾಯಕರಾದ ಜೆ ಹೆಚ್ ಪಟೇಲರು ಬಿಜೆಪಿಯಿಂದ ಬೆಂಬಲ ಪಡೆದರು. ಅಂದು ಕೋಮುವಾದಿ ಬಿಜೆಪಿ ಅಂತ ಗೊತ್ತಾಗದೆ ಇವತ್ತು ಯಾಕೆ ಕೋಮುವಾದಿ ಎಂದು ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವಕಾಶವಾದಿ ರಾಜಕಾರಣಿ. ಮಜಾ ಮಾಡಲು ಸಮಾಜವಾದಿ. ರಾಷ್ಟ್ರವಾದಿಗಳ ಬಗ್ಗೆ ಯಾಕೆ ಟೀಕೆ ಮಾಡುತ್ತಾರೆ ಗೊತ್ತಿಲ್ಲ. ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಬಿಜೆಪಿಯಲ್ಲಿ ಹೆಣ ಇಟ್ಟುಕೊಳ್ಳುವ ವ್ಯವಸ್ಥೆ ಇಲ್ಲ..ಸಂಸದ ರಾಘವೇಂದ್ರ : ಬಿಜೆಪಿಯಲ್ಲಿ ಹೆಣ ಇಟ್ಟುಕೊಳ್ಳುವ ಪದ್ಧತಿ ಇಲ್ಲ ಎಂದು ಸಂಸದ ಬಿ ವೈ ರಾಘವೇಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಯಾವಾಗಲೂ ಜೀವ ಉಳಿಸುವ ಕೆಲಸ ಮಾಡುತ್ತದೆ. ಕೊರೊನಾ ಸಂದರ್ಭದಲ್ಲಿ ನಮ್ಮ ಪ್ರಧಾನಿಯವರು ಕೋಟ್ಯಂತರ ಜನರ ಜೀವ ಉಳಿಸಿದ್ದಾರೆ ಎಂದು ಹೇಳಿದರು.
ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ ಮಾಧ್ಯಮದಲ್ಲಿ ನೋಡಿದ್ದೇನೆ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರದ ನಾಯಕರಿಂದ ನಮಗೆ ಯಾವುದೇ ಮಾಹಿತಿ ಇಲ್ಲ. ಮೈತ್ರಿಯಾದರೆ ಅನುಕೂಲ ಆಗುತ್ತದೆ ಎಂದು ಹೇಳಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು ರಾಜ್ಯದಲ್ಲಿ 28 ಸ್ಥಾನದಲ್ಲಿ 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸರ್ಕಾರ ಬರಗಾಲದಲ್ಲೂ ಕೂಡ ಜನರಿಗೆ ಸ್ಪಂದನೆ ಮಾಡುವ ಕೆಲಸ ಮಾಡುತ್ತಿಲ್ಲ. ಬಿಜೆಪಿ ಸರ್ಕಾರದ ಕೆಲವು ಯೋಜನೆಗಳನ್ನು ಕೈಬಿಟ್ಟಿದ್ದಾರೆ. ಈ ಬಾರಿ ಸರಾಸರಿ ಮಳೆ ಕಡಿಮೆಯಾಗಿದೆ. ಬರಗಾಲ ಘೋಷಣೆ ಮಾಡಿ ಅಂದ್ರೆ ವಿಳಂಬ ಮಾಡುತ್ತಿದ್ದಾರೆ. ರೈತರ ಸಮಸ್ಯೆಗೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಚಿವರು ರೈತರ ಆತ್ಮಹತ್ಯೆಯ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಸರ್ಕಾರ ಕೂಡಲೇ ಬರಗಾಲ ಘೋಷಣೆ ಮಾಡಬೇಕು ಹಾಗೂ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಬೇಕು. ಜೊತೆಗೆ ರೈತರಿಗೆ ಬೆಳೆ ವಿಮೆ ಕೊಡಬೇಕು ಎಂದು ಆಗ್ರಹಿಸಿದರು.
ಆತ್ಮಹತ್ಯೆಗೈದ ರೈತರಿಗೆ ಪರಿಹಾರ ಸಿಕ್ಕಿಲ್ಲ : ರೈತರ ಆತ್ಮಹತ್ಯೆ ವರದಿ ಪಡೆದು ಶೀಘ್ರವಾಗಿ ಪರಿಹಾರ ಕೊಡಬೇಕು. ಬೇರೆ ಬೇರೆ ಕಾರಣಕ್ಕೆ ಆತ್ಮಹತ್ಯೆ ಆಗಿದ್ದರೆ ಪರಿಶೀಲನೆ ನಡೆಸಲಿ. ಆತ್ಮಹತ್ಯೆ ಪರಿಹಾರ ವಿಷಯದಲ್ಲಿ ಅಧಿಕಾರಿಗಳು ತಾರತಮ್ಯ ಮಾಡಬಾರದು. ರೈತರ ವಿಚಾರದಲ್ಲಿ ಚೆಲ್ಲಾಟ ಆಡಬಾರದು. ಸರ್ಕಾರ ಬರಗಾಲ ಘೋಷಣೆ ಮಾಡುವುದನ್ನು ಬಿಟ್ಟು ಸಚಿವರಿಗೆ ಹೊಸ ಕಾರು ಖರೀದಿಗೆ ಮುಂದಾಗಿದ್ದಾರೆ. ಜೊತೆಗೆ ಗ್ಯಾರಂಟಿ ಯೋಜನೆಗೆ ಬೇರೆ ಬೇರೆ ಯೋಜನೆ ಹಣ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ : ಸಚಿವ ಡಿ ಸುಧಾಕರ್ ವಿರುದ್ಧ ಸುಳ್ಳು ಕೇಸ್, ಬಿಜೆಪಿಯವರು ಕನಸು ಕಾಣೋದು ಬೇಡ: ಡಿಸಿಎಂ ಡಿ ಕೆ ಶಿವಕುಮಾರ್