ಶಿವಮೊಗ್ಗ: ಮುಂಗಾರು ಮಳೆ ಹೆಚ್ಚಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಮುಖ ಜಲಪಾತ, ಸಫಾರಿ ಮತ್ತು ಚಾರಣ ತಾಣಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಕುದುರೆಮುಖದ ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ರಾಜ್ಯದ ಪ್ರಸಿದ್ಧ ಧಾರ್ಮಿಕ ಹಾಗೂ ಚಾರಣ ತಾಣವಾದ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯ ಗಡಿಭಾಗವಾದ ಕೊಡಚಾದ್ರಿ ಬೆಟ್ಟಕ್ಕೂ ಪ್ರವೇಶ ನಿಷೇಧಿಸಲಾಗಿದೆ.
ಮುಂಗಾರು ಮಳೆ ತೀವ್ರಗೊಂಡಿದ್ದು, ಜಲಪಾತಗಳ ವೀಕ್ಷಣೆಗೆ ಹೆಚ್ಚಿನ ಪ್ರವಾಸಿಗರು ಬರುವ ಸಾಧ್ಯತೆ ಇದೆ. ಪ್ರವಾಸಿಗರು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕೊಡಚಾದ್ರಿ ಮತ್ತು ಇತರ ತಾಣಗಳ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಕೊಡಚಾದ್ರಿ ಬೆಟ್ಟದ ಜೊತೆಗೆ ಸ್ಥಳೀಯ ಜಲಪಾತಗಳಿಗೂ ಪ್ರವೇಶ ಸಹ ನಿಷೇಧವಿದೆ. ಕೊಡಚಾದ್ರಿಗೆ ನಿಷೇಧ ಹೇರಿರುವುದರಿಂದ ಸ್ಥಳೀಯ ವ್ಯಾಪಾರಿಗಳಿಗೆ ಹಾಗೂ ಜೀಪ್ ಚಾಲಕರಿಗೆ ತೀವ್ರ ತೊಂದರೆ ಉಂಟಾಗಿದೆ.
ಈ ಜಲಪಾತಗಳ ವೀಕ್ಷಣೆಗೂ ನಿರ್ಬಂಧ: ಮುನ್ನೆಚ್ಚರಿಕಾ ಕ್ರಮವಾಗಿ ಈ ವಲಯದಲ್ಲಿರುವ ಅರಿಶಿನಗುಂಡಿ, ಕೂಡ್ಲು, ಬರ್ಕಳ, ಹಿಡ್ಲುಮನೆ, ವನಕಬ್ಬಿ, ಬಂಡಾಜೆ ಜಲಪಾತ್ರಗಳ ಪ್ರವೇಶಕ್ಕೂ ನಿರ್ಬಂಧ ವಿಧಿಸಲಾಗಿದೆ.
ಚಾರಣ ನಿಷೇಧವಿರುವ ಪ್ರದೇಶಗಳಿವು..: ಕುದುರೆಮುಖ ಪೀಕ್, ನೇತ್ರಾವತಿ ಪೀಕ್, ನರಸಿಂಹಗಡ-ಗಡಾಯಿಕಲ್ಲು, ವಾಲಿಕುಂಜ, ನರಸಿಂಹಪರ್ವತ, ಗಂಗಡಿಕಲ್ಲು, ಕುರಿಂಗಲ್ನಲ್ಲಿ ಚಾರಣಕ್ಕೂ ಸದ್ಯಕ್ಕೆ ಕಡಿವಾಣ ಹಾಕಲಾಗಿದೆ. ಕಟ್ಟಿನಹೊಳೆ ಮೂಲಕ ಕೊಡಚಾದ್ರಿಗೆ ತೆರಳುವ ವಾಹನ ವ್ಯವಸ್ಥೆ, ಕುದುರೆಮುಖ-ಸಿಂಗ್ಸಾರ್ ಸಫಾರಿ ಪ್ರದೇಶಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಯುವಕ ಕೊಚ್ಚಿಹೋದ ಅರಿಶಿನಗುಂಡಿ ಜಲಪಾತ ಪ್ರವೇಶಕ್ಕೂ ಇಲ್ಲ ಅವಕಾಶ: ಉಡುಪಿ ಜಿಲ್ಲೆಯ ಕೊಲ್ಲೂರು ಬಳಿಯಿರುವ ಅರಶಿನಗುಂಡಿ ಜಲಪಾತದಲ್ಲಿ ಕಳೆದ ವಾರವಷ್ಟೇ ಭದ್ರಾವತಿ ಮೂಲದ ಶರತ್ ಕುಮಾರ್ (23) ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಬಂಡೆಯ ಮೇಲೆ ನಿಂತು ಫಾಲ್ಸ್ ವೀಕ್ಷಿಸುವಾಗ ಯುವಕ ಜಾರಿ ಬಿದ್ದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಹೀಗಾಗಿ, ಅರಶಿನಗುಂಡಿ ಫಾಲ್ಸ್ ವೀಕ್ಷಣೆಗೆ ನಿರ್ಬಂಧವಿದೆ.
ಇದನ್ನೂ ಓದಿ: Watch: ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ನೀರಿನಲ್ಲಿ ಕೊಚ್ಚಿಹೋದ ಯುವಕ.. ದೃಶ್ಯ ಮೊಬೈಲ್ನಲ್ಲಿ ಸೆರೆ
ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಲ್ಲೂ ನಿರ್ಬಂಧ: ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಪಾತಗಳು ಮೈದುಂಬಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಪ್ರವಾಸದ ವೇಳೆ ಮೈ ಮರೆಯುತ್ತಿರುವುದರಿಂದ ಜೀವಹಾನಿಗಳಾಗುತ್ತವೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಜಲಪಾತಗಳ ವೀಕ್ಷಣೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಪ್ರವಾಸಿ ತಾಣಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಪ್ರವಾಸಿಗರು ಫಾಲ್ಸ್ಗಳಲ್ಲಿ ಇಳಿದು ಅಪಾಯ ತಂದುಕೊಳ್ಳುತ್ತಾರೆ. ಇದರಿಂದ ನಿರ್ಬಂಧ ಹೇರಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ತಿಳಿಸಿದ್ದಾರೆ.
ಹೊನ್ನಾವರದ ಅಪ್ಸರಕೊಂಡ, ಗೋಕರ್ಣ ಸಮೀಪದ ವಿಭೂತಿ ಫಾಲ್ಸ್, ಮಾಗೋಡ್ ಫಾಲ್ಸ್, ಯಲ್ಲಾಪುರ ತಾಲೂಕು ವ್ಯಾಪ್ತಿಯ ಶಿರ್ಲೆ, ಕುಳಿಮಾಗೋಡು, ಕಾನೂರು ಸೇರಿದಂತೆ ಅನೇಕ ದಟ್ಟ ಅರಣ್ಯ ಪ್ರದೇಶದೊಳಗಿನ ಪಾಲ್ಸ್ಗಳಿಗೂ ನಿರ್ಬಂಧ ಹೇರಲಾಗಿದೆ.