ಶಿವಮೊಗ್ಗ: ಕೊಟ್ಟಿಗೆ ಮನೆಗೆ ಏಕಾಏಕಿ ನುಗ್ಗಿದ್ದ ಕಾಳಿಂಗ ಸರ್ಪವನ್ನು ಉರಗ ರಕ್ಷಕ ಸ್ನೇಕ್ ಕಿರಣ್ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಹೋಬಳಿ ಕುರುವಳ್ಳಿಯ ಸುಶೀಲಮ್ಮ ಎಂಬುವವರ ಮನೆಯ ಹಿಂಭಾಗದ ಕೊಟ್ಟಿಗೆಗೆ ಕಾಳಿಂಗ ಸರ್ಪವೊಂದು ನುಗ್ಗಿತ್ತು. ಗಾಬರಿಯಾರಿಯಾದ ಮನೆಯವರು ತಕ್ಷಣ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಅಷ್ಟರಲ್ಲಿ ಕಾಳಿಂಗ ಸರ್ಪ ಮನೆಯ ಒಳಗೆ ಸೇರಿ ಕೊಂಡಿತ್ತು. ಇನ್ನು ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ ಮನೆಯ ಮೂಲೆಯಲ್ಲಿದ್ದ ಕಾಳಿಂಗವನ್ನು ಹಿಡಿದು ಮನೆಯಿಂದ ಹೊರಗೆ ತಂದರು.
ಇನ್ನು ಸರ್ಪವನ್ನು ಹಿಡಿಯುವಲ್ಲಿ ಯಶಸ್ವಿಯಾದ ಕಿರಣ್ ತಾವು ತಂದಿದ್ದ ಬಟ್ಟೆ ಚೀಲದಲ್ಲಿ ತುಂಬಿಕೊಂಡು ನಂತರ ಅದನ್ನು ಅರಣ್ಯಾಧಿಕಾರಿಯವರ ಸಮ್ಮುಖದಲ್ಲಿ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದರು.