ಶಿವಮೊಗ್ಗ: ಸ್ಮಾರ್ಟ್ ಸಿಟಿಯ 400 ಕೋಟಿ ರೂಗಳ ವಿವಿಧ ಕಾಮಗಾರಿಗಳಿಗೆ ನಗರಾಭಿವೃದ್ದಿ ಖಾತೆ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದರು.
ನಗರದ ಗೋಪಿ ವೃತ್ತದಲ್ಲಿ ಕಾಮಗಾರಿಗಳಿಗೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಹಾಲಿ- ಮಾಜಿ ಸಚಿವರು ಪರಸ್ಪರ ಅಭಿವೃದ್ಧಿ ವಿಷಯದಲ್ಲಿ ಟಾಂಗ್ ನೀಡಿದ್ದು, ನೆರೆದಿದ್ದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ನಿಮ್ಮ ಸರ್ಕಾರ ಏನಾದರೂ ಐದು ವರ್ಷದವರೆಗೆ ಇದ್ದರೆ ಶಿವಮೊಗ್ಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು, ಸ್ಮಾರ್ಟ್ ಸಿಟಿ ಅನುದಾನದ ಜೊತೆ ನಿಮ್ಮ ಇಲಾಖೆಯಿಂದ ಹೆಚ್ಚಿನ ಅನುದಾನ ನೀಡಬೇಕು. ಅಲ್ಲದೇ ಶಿವಮೊಗ್ಗ ಕ್ಷೇತ್ರಕ್ಕೆ ಕನಿಷ್ಟ 25 ಕೋಟಿ ಅನುದಾನವಾದರೂ ನೀಡಿ ಎಂದು ಖಾದರ್ ಉದ್ದೇಶಿಸಿ ಮಾತನಾಡಿದರು.
ಶಾಸಕರುಗಳ ಕ್ಷೇತ್ರಕ್ಕೆ ಎರಡು ಕೋಟಿ ನೀಡುವುದಾಗಿ ಸಿಎಂ ಹೇಳಿದ್ರು. ಈಗ ಒಂದು ಕೋಟಿ ಮಾತ್ರ ಬಂದಿದೆ. ಉಳಿದ ಒಂದು ಕೋಟಿಯನ್ನು ಬೇಗ ಬಿಡುಗಡೆ ಮಾಡಿಸಿ ಹಾಗೂ ಮಲೆನಾಡು ಅಭಿವೃದ್ಧಿ ಮಂಡಳಿಯಿಂದಲೂ ಸ್ಥಳೀಯ ಶಾಸಕರುಗಳಿಗೆ ಅನುದಾನ ಬಿಡುಗಡೆ ಮಾಡಿಸಿ. ಜಿಲ್ಲೆಯ ರಾಜಕಾರಣಿಗಳು ಚುನಾವಣೆಯಲ್ಲಿ ಅಷ್ಟೆ ರಾಜಕೀಯ ಮಾಡುತ್ತೇವೆ, ಅಭಿವೃದ್ಧಿಯನ್ನು ನಾವು ಒಟ್ಟಿಗೇ ಮಾಡುತ್ತೇವೆ ಎಂದರು.
ಸಚಿವ ಯು.ಟಿ.ಖಾದರ್ ರವರು ತಮ್ಮ ಭಾಷಣದಲ್ಲಿ ಈಶ್ವರಪ್ಪನವರನ್ನು ಹೂಗಳುತ್ತಲೆ ಟಾಂಗ್ ಕೊಟ್ಟರು. ನಮ್ಮ ಸರ್ಕಾರ ಸುಭದ್ರವಾಗಿ ಐದು ವರ್ಷ ನಡೆಯಲು ಬಿಟ್ಟರೆ ನಿಮಗೆ ಅನುದಾನ ನೀಡುತ್ತೇವೆ. ನಮ್ಮವರು ನಿಮ್ಮ ಬಳಿ ಬಂದ್ರೆ ಪುನಃ ನಮ್ಮ ಬಳಿಯೆ ಕಳುಹಿಸಿ ಎಂದು ಆಪರೇಷನ್ ಕಮಲಕ್ಕೆ ಟಾಂಗ್ ನೀಡಿದರು.
ಇನ್ನೂ 25 ಕೋಟಿ ಬೇಡಿಕೆಗೆ ಪ್ರತಿಕ್ರಿಯೆ ನೀಡಿದ ಖಾದರ್, ನಮ್ಮ ಇಲಾಖೆಯಿಂದ 10 ಕೋಟಿ ನೀಡುತ್ತೆನೆ. ರಾಜ್ಯ ಸರ್ಕಾರ ನಗರೋತ್ಥಾನ, ಮಲೆನಾಡು ಅಭಿವೃದ್ಧಿ ಮಂಡಳಿ, ಸ್ಮಾರ್ಟ್ ಸಿಟಿ ಹಣ ಹೀಗೆ ಸಾಕಷ್ಟು ಹಣ ನಗರಕ್ಕೆ ಬರುತ್ತಿದೆ ಎಂದು ತಿಳಿಸಿದರು.