ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಮರಳು ಹಾಗೂ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುವವರ ವಿರುದ್ದ ಕಠಿಣ ಕ್ರಮ ತೆಗೆದು ಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಜಿಲ್ಲಾ ಕೆ.ಡಿ.ಪಿ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇಂದು ಜಿಲ್ಲಾ ಪಂಚಾಯತ್ನ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನ ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಈ.ಕಾಂತೇಶ್ ಅವರು ಜಿಲ್ಲೆಯಲ್ಲಿ ಇನ್ನೂ ಸರ್ಕಾರಿ ಮರಳು ಕ್ವಾರೆಗಳು ಪ್ರಾರಂಭವಾಗಿಲ್ಲ. ಆದರೆ, ಈಗಾಗಲೆ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ ಎಂದು ಆರೋಪಿಸಿದರು. ತೀರ್ಥಹಳ್ಳಿಯ ಮಹಿಷಿ ಭಾಗದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಇದರಲ್ಲಿ ಶಾಸಕರಿಗೂ ಮಂತ್ರಿಗಳಿಗೂ ಮಾಮೂಲಿ ಹೋಗ್ತಾ ಇದೆ ಎಂದು ಹೇಳುತ್ತಿದ್ದಂತೆಯೇ ಸಚಿವ ಈಶ್ಚರಪ್ಪ ಜಿಲ್ಲಾಧಿಕಾರಿಗಳ ವಿರುದ್ದ ಗರಂ ಆದರು. ಅಧಿಕಾರಿಗಳು ಏನ್ ಮಾಡ್ತಾ ಇದ್ದೀರಿ ಅಂತ ರೇಗಿದರು. ಆಶ್ರಯ ಮನೆ, ಮನೆಯ ಶೌಚಾಲಯ ನಿರ್ಮಾಣಕ್ಕೆ ಸಣ್ಣ ಪ್ರಮಾಣದಲ್ಲಿ ಮರಳು ತಂದರೆ ಹಿಡಿದು ಕೇಸ್ ಹಾಕ್ತಿರಾ. ಜಿಲ್ಲೆಯಲ್ಲಿ ಮರಳು ಲೂಟಿ ಮಾಡಲಾಗುತ್ತಿದೆ. ಇಷ್ಟಾದ್ರೂ ಕಣ್ ಮುಚ್ಚಿ ಕುಳಿತಿದ್ದೀರಾ. ಈ ರೀತಿಯ ವಿಷಯಗಳು ಇನ್ನೂ ಮುಂದೆ ಕೆಡಿಪಿಯಲ್ಲಿ ಬರಬಾರದು ಎಂದು ಖಡಕ್ ಆಗಿ ವಾರ್ನಿಂಗ್ ನೀಡಿದರು.
ಈ ವೇಳೆ ಎಸ್ಪಿ ಶಾಂತರಾಜುರವರು ಕಳೆದ ಮೂರು ತಿಂಗಳಿನಿಂದ 631 ಲೋಡ್ ಅಕ್ರಮ ಮರಳನ್ನು ವಶಕ್ಕೆ ಪಡೆದು ಕೊಂಡಿರುವುದಾಗಿ ತಿಳಿಸಿದಕ್ಕೆ ಗರಂ ಆದ ಸಚಿವರು, ನೀವು 631 ಲೋಡ್ ಹೇಳ್ತಾ ಇದ್ದೀರಿ. ಅಲ್ಲಿ 6 ಸಾವಿರ ಲೋಡ್ ಮರಳು ಹೋಗಿದೆ ಎಂದರು.
ಕನ್ನಂಗಿಯ ಶುದ್ದ ಕುಡಿಯುವ ನೀರಿನ ಘಟಕ ಯಾರದ್ದು?: ಸಭೆಯಲ್ಲಿ ತೀರ್ಥಹಳ್ಳಿಯ ಕನ್ನಂಗಿ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ ವರ್ಷವಾದ್ರೂ ಇನ್ನೂ ಉದ್ಘಾಟನೆ ಆಗಿಲ್ಲ. ಜನರ ಉಪಯೋಗಕ್ಕೆ ಸಿಕ್ತಿಲ್ಲ ಎಂದು ಜಿ.ಪಂ ಸದಸ್ಯರು ಪ್ರಶ್ನೆ ಮಾಡಿದಾಗ ಜಿಲ್ಲಾ ಪಂಚಾಯತ್ ನವರು ನಾವು ಸ್ಥಾಪನೆ ಮಾಡಿಲ್ಲ ಅದು ಎಸ್ಸಿ/ಎಸ್ಟಿ ಇಲಾಖೆಯವರು ಸ್ಥಾಪನೆ ಮಾಡಿದ್ದು ಎಂದರು. ಆದರೆ ಎಸ್ಸಿ/ಎಸ್ಟಿ ಇಲಾಖೆಯವರು ಇದನ್ನು ನಾವು ಮಾಡಿಲ್ಲ ಎಂದರು. ಅಧಿಕಾರಿಗಳ ಉತ್ತರಕ್ಕೆ ಸಚಿವ ಈಶ್ವರಪ್ಪ ವಾಹ್ ..! ಎಂದರು. ಅಧಿಕಾರಿಗಳಿಗೆ ಇಲಾಖೆಗಳ ನಡುವೆ ಹೊಂದಾಣಿಕೆಯೇ ಇಲ್ಲದಂತೆ ಆಗಿದೆ. ಇದರಿಂದ ಕನ್ನಂಗಿಯ ಕುಡಿಯುವ ನೀರಿನ ಘಟಕವನ್ನು ಗ್ರಾಮ ಪಂಚಾಯಿತಿಗೆ ಒಪ್ಪಿಸಿ ಎಂದು ಜಿ.ಪಂ ಸಿಇಒ ವೈಶಾಲಿರವರಿಗೆ ತಿಳಿಸಿದರು. ಸಭೆಯನ್ನು ಪೂರ್ಣಗೊಳಿಸದೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಸಚಿವರು, ಇಂದಿನ ಸಭೆಯಲ್ಲಿ ಮಂಗನ ಕಾಯಿಲೆಯ ಲ್ಯಾಬ್ ಅನ್ನು ಸಾಗರದಲ್ಲಿ ಸ್ಥಾಪನೆ ಮಾಡಬೇಕು ಎಂಬ ತೀರ್ಮಾನ ಮಾಡಲಾಗಿದೆ. ಅಕ್ರಮ ಮರಳು ಗಣಿಗಾರಿಕೆ, ಅಕ್ರಮ ಸಾರಾಯಿ ಮಾರಾಟಕ್ಕೆ ಬ್ರೇಕ್ ಹಾಕಲು ಡಿಸಿ, ಎಸ್ಪಿಗೆ ಸೂಚನೆ ನೀಡಲಾಗಿದೆ. ಯುಟಿಪಿಯ ಕಾಲುವೆ ಕಾಮಗಾರಿಯಲ್ಲಿ ಕಳಪೆಯಾಗಿದೆ. ಇದರ ಪರಿಶೀಲನೆಗೆ ಜಿ.ಪಂ ಅಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ, ಸಮಿತಿ ವರದಿ ಬಳಿಕ ಕ್ರಮ ತೆಗೆದು ಕೊಳ್ಳಲಾಗುವುದು ಹಾಗೂ ವಿಶೇಷವಾಗಿ ಯಾವೆಲ್ಲ ಗ್ರಾಮಗಳು ಮಧ್ಯ ನಿಷೇಧಿಸಲು ಕೇಳಿಕೊಂಡಿದೆಯೋ ಅಲ್ಲೆಲ್ಲ ಮಧ್ಯ ಮಾರಾಟವನ್ನು ನಿಲ್ಲಸಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಡಿಸಿ ಶಿವಕುಮಾರ್, ಎಸ್ಪಿ ಶಾಂತರಾಜು, ಜಿ.ಪಂ ಅಧ್ಯಕ್ಷೆ ಜ್ಯೋತಿ ಕುಮಾರ್, ಜಿ.ಪಂ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.