ಶಿವಮೊಗ್ಗ: ಇಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಮಧ್ಯಪ್ರದೇಶ ತಂಡಗಳ ರಣಜಿ ಕ್ರಿಕೆಟ್ ಪಂದ್ಯಾವಳಿಯ ಮೊದಲ ದಿನದ ಮುಕ್ತಾಯಕ್ಕೆ ಕರ್ನಾಟಕ 86 ಓವರ್ಗಳಿಗೆ 3 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿದೆ.
ರಾಜ್ಯದ ಪರ ಶತಕ ಬಾರಿಸಿದ ಸಮರ್ಥ್ (105*) ಮತ್ತು ಸಿದ್ದಾರ್ಥ್ 62 ರನ್ ಗಳಿಸಿ ಅಜೇಯರಾಗಿ ಉತ್ತಮ ಜೊತೆಯಾಟ ನೀಡಿದ್ದು ನಾಳೆಗೆ 2ನೇ ದಿನದ ಆಟಕ್ಕೆ ಕಾಯ್ದಿರಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಮಧ್ಯಪ್ರದೇಶ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡ ಆರಂಭಿಕ ಆಘಾತ ಎದುರಿಸಿತು. ಆರಂಭಿಕರಾಗಿ ಸಮರ್ಥ್ ಮತ್ತು ದೇವದತ್ತ ಪಡಿಕ್ಕಲ್ ಕಣಕ್ಕಿಳಿದರು. ಆದರೆ, ಮೂರನೇ ಓವರ್ನಲ್ಲಿ ಪಡಿಕ್ಕಲ್ ಸೊನ್ನೆ ಸುತ್ತಿದರು. ಬಳಿಕ ರೋಹನ್ ಕಡಂಬಿ (9), ನಾಯಕ ಕರುಣ್ ನಾಯರ್ (22) ಬಹುಬೇಗನೇ ಪೆವಿಲಿಯನ್ಗೆ ಮರಳಿದರು.
ಒತ್ತಡಕ್ಕೆ ಸಿಲುಕಿದ್ದ ತಂಡಕ್ಕೆ ನಂತರ ಆಸರೆಯಾದ ಸಿದ್ದಾರ್ಥ್, ಸಮರ್ಥ್ಗೆ ಸಾಥ್ ನೀಡಿ ತಂಡದ ರನ್ ಗಳಿಕೆಗೆ ಚೇತರಿಕೆ ನೀಡಿದರು. ಸಮರ್ಥ್ ಮತ್ತು ಸಿದ್ಧಾರ್ಥ್ ಜೊತೆಗೂಡಿ 4ನೇ ವಿಕೆಟ್ಗೆ 150 ರನ್ಗಳ ಮುರಿಯದ ಜೊತೆಯಾಟವಾಡಿದರು. ಈ ಪಂದ್ಯ ನೋಡಲು ಶಾಲೆಯ ಮಕ್ಕಳು ಆಗಮಿಸಿದ್ದರು. ಈ ವೇಳೆ ಪರಿಸರ ಜಾಗೃತಿ ಮೂಡಿಸುವ ಫಲಕಗಳನ್ನು ಪ್ರದರ್ಶಿಸಿದರು.
ಈ ವೇಳೆ ಮಾತನಾಡಿದ ಶತಕ ವೀರ ಸಮರ್ಥ್, ಒಳ್ಳೆಯ ಪಿಚ್ ಇದ್ದ ಕಾರಣ ಶತಕ ಪೂರೈಸಲು ಸಾಧ್ಯವಾಯಿತು. ಬೌಲಿಂಗ್ನ 3ನೇ ಸೆಷನ್ನಲ್ಲಿ ಮಧ್ಯಪ್ರದೇಶದ ಬೌಲರ್ಗಳು ಸುಸ್ತಾಗಿದ್ದರು. ಇದನ್ನೆ ಬಳಸಿಕೊಂಡು ರನ್ ಸೇರಿಸಲು ಪ್ರಾರಂಭಿಸಿದೆ. ನಂತ್ರ ಅದು ಶತಕದ ಹತ್ತಿರಕ್ಕೆ ಬಂದಿತು. ನಾನು ಶತಕ ಹೊಡೆಯುತ್ತೇನೆ ಎಂದು ಭಾವಿಸಿರಲಿಲ್ಲ. ಬಾಲ್ಗೆ ತಕ್ಕಂತೆ ಆಟ ಆಡಿದ್ದೇನೆ. ಆಟವಾಡಲು ಯಾವುದೇ ಪ್ಲಾನ್ ಮಾಡಿಕೊಂಡಿರಲಿಲ್ಲ ಎಂದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ರೋಜರ್ ಬಿನ್ನಿ ಮಾತನಾಡಿ, ಈ ಪಂದ್ಯ ರಾಜ್ಯಕ್ಕೆ ಮಹತ್ವದಾಗಿದೆ. ಇನ್ನೂ ಮೂರು ದಿನ ಶಿವಮೊಗ್ಗದಲ್ಲಿ ಕ್ರಿಕೆಟ್ ಮನರಂಜನೆ ಇರುತ್ತದೆ. ಎಲ್ಲರು ಬಂದು ಕ್ರೀಡೆಯನ್ನು ಪ್ರೋತ್ಸಾಹಿಸಬೇಕು. ಶಿವಮೊಗ್ಗದಲ್ಲಿ ಕ್ರಿಕೆಟ್ಗೆ ಒಳ್ಳೆಯ ಭವಿಷ್ಯವಿದೆ. ಅದಕ್ಕೆ ಇಲ್ಲಿ ನಡೆಯುತ್ತಿರುವ ಪಂದ್ಯಗಳೇ ಸಾಕ್ಷಿ ಎಂದರು.