ಶಿವಮೊಗ್ಗ: ತೀರ್ಥಹಳ್ಳಿಯನ್ನು ಸುಸಂಸ್ಕೃತರ ಕ್ಷೇತ್ರವೆಂದೇ ಕರೆಯಲಾಗುತ್ತದೆ. ಸಾಹಿತಿಗಳ ತವರೂರು, ಆಗುಂಬೆಯ ಬೀಡು ಎಂಬ ಖ್ಯಾತಿಯೂ ಇದೆ. ರಾಷ್ಟ್ರಕವಿ ಕುವೆಂಪು ಹಾಗೂ ಯು.ಆರ್.ಅನಂತಮೂರ್ತಿ ಅವರಂತಹ ಇಬ್ಬರು ಜ್ಞಾನಪೀಠ ಪುರಸ್ಕೃತರ ತವರಿದು. ಮೌಲ್ಯಯುತ ರಾಜಕಾರಣಕ್ಕೂ ತೀರ್ಥಹಳ್ಳಿ ಸಾಕ್ಷಿಯಾಗಿದೆ. ಬದಲಾದ ಕಾಲಘಟ್ಟದೊಂದಿಗೆ ತೀವ್ರ ಪೈಪೋಟಿ ಮತ್ತು ಜಿದ್ದಾಜಿದ್ದಿನ ರಾಜಕೀಯ ಕಣ ಏರ್ಪಟ್ಟಿದ್ದು, ಪ್ರಸಕ್ತ ವಿಧಾನಸಭಾ ಚುನಾವಣೆ ಕಾವು ಮತ್ತಷ್ಟು ಜೋರಾಗಿದೆ.
ತೀರ್ಥಹಳ್ಳಿ ಕ್ಷೇತ್ರದಲ್ಲಿ ಆರು ಅಣೆಕಟ್ಟುಗಳಿವೆ. ಸಂಪೂರ್ಣ ಮಲೆನಾಡಿನಿಂದ ಆವರಿಸಿದ ಕ್ಷೇತ್ರವಿದು. ಶೇ.80ರಷ್ಟು ಅರಣ್ಯ ಪ್ರದೇಶ ಒಳಗೊಂಡಿದೆ. ಮತಕ್ಷೇತ್ರವು ಉಡುಪಿ ಜಿಲ್ಲೆಯ ಗಡಿ ಭಾಗದಿಂದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಗಡಿ ಭಾಗದವರೆಗೂ ಹರಡಿದೆ. ಇದೇ ವಿಧಾನಸಭಾ ಕ್ಷೇತ್ರದಿಂದ ಕಡಿದಾಳು ಮಂಜಪ್ಪ ಹಾಗೂ ಶಾಂತವೇರಿ ಗೋಪಾಲಗೌಡರು ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. ಕಡಿದಾಳು ಮಂಜಪ್ಪ ರಾಜ್ಯದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು. ಈ ಕ್ಷೇತ್ರ ಸಮಾಜವಾದಿಗಳ ನೆಲವಾಗಿದ್ದು, ಇಲ್ಲಿ ಹಣ-ಹೆಂಡಕ್ಕೆ ಮತ ಹಾಕುವವರಿಲ್ಲ. ಶಾಂತವೇರಿ ಗೋಪಾಲಗೌಡರವರಿಗೆ ಚುನಾವಣೆ ಎದುರಿಸಲು ಮತದಾರರೇ ಹಣ ನೀಡಿ ಔದಾರ್ಯ ತೋರಿದ ಮಹೋನ್ನತ ನಿದರ್ಶನವಿದೆ.
ಕೈ-ಕಮಲಕ್ಕೆ ತಲಾ 4 ಬಾರಿ ಗೆಲುವು: 1967ರಿಂದ 2018ರವರೆಗೆ ನಡೆದ ವಿಧಾನಸಭಾ ಚುನಾವಣೆಗಳ ಪೈಕಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ತಲಾ ನಾಲ್ಕು ಬಾರಿ ಮತದಾರರು ಗೆಲ್ಲಿಸಿದ್ದಾರೆ. ಜನತಾ ದಳ, ಜನತಾ ಪಕ್ಷ ಮತ್ತು ಎಸ್ಒಪಿ ಹಾಗೂ ಸಂಯುಕ್ತ ಸಮಾಜವಾದಿ ಪಕ್ಷ ತಲಾ ಒಂದು ಗೆಲುವು ಸಾಧಿಸಿದೆ. ಬಿ.ಡಿ.ಚಂದ್ರೇಗೌಡರು ಎರಡು ಬಾರಿ ಶಾಸಕರಾಗಿ ಆಯ್ಕೆಯಾದರೆ, ಬಿಜೆಪಿಯ ಆರಗ ಜ್ಞಾನೇಂದ್ರ ನಾಲ್ಕು ಸಲ ಹಾಗೂ ಕಾಂಗ್ರೆಸ್ನ ಕಿಮ್ಮನೆ ರತ್ನಾಕರ್ ಎರಡು ಬಾರಿ ಜಯ ಕಂಡಿದ್ದಾರೆ.
ಎರಡೂವರೆ ದಶಕದಿಂದ ರತ್ನಾಕರ್-ಜ್ಞಾನೇಂದ್ರ ಪೈಪೋಟಿ: ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಳೆದ ಎರಡೂವರೆ ದಶಕದಿಂದ ಆರಗ ಜ್ಞಾನೇಂದ್ರ ಮತ್ತು ಕಿಮ್ಮನೆ ರತ್ನಾಕರ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. 1994ರಲ್ಲೇ ಮೊದಲ ಬಾರಿಗೆ ಆರಗ ಜ್ಞಾನೇಂದ್ರ, ಜನತಾ ದಳದಿಂದ ಸ್ಪರ್ಧಿಸಿದ್ದ ಚಂದ್ರೇಗೌಡರು ವಿರುದ್ಧ ಗೆಲುವಾಗಿತ್ತು. ನಂತರದಲ್ಲಿ ಚುನಾವಣೆಗಳಲ್ಲಿ ರತ್ನಾಕರ್ ಮತ್ತು ಜ್ಞಾನೇಂದ್ರ ಸ್ಪರ್ಧೆ ನಡೆಯುತ್ತಲೇ ಇದೆ.
1999ರಲ್ಲಿ ಮೊದಲ ಸಲ ಇಬ್ಬರು ವಿಧಾನಸಭಾ ಅಖಾಡದಲ್ಲಿ ಮುಖಾಮುಖಿಯಾಗಿದ್ದರು. ಆದರೆ, 1999 ಹಾಗೂ 2004ರ ಎರಡೂ ಚುನಾವಣೆಗಳಲ್ಲೂ ರತ್ನಾಕರ್ ವಿರುದ್ಧ ಜ್ಞಾನೇಂದ್ರ ಕ್ರಮವಾಗಿ 4,102 ಮತ್ತು 1375 ಮತಗಳ ಅಂತರದಿಂದ ಗೆದ್ದು ಹ್ಯಾಟ್ರಿಕ್ ಜಯ ದಾಖಲಿಸಿದ್ದರು. ನಂತರದಲ್ಲಿ 2008ರಲ್ಲಿ ಕೆಜೆಪಿಯ ಆರ್.ಎಂ.ಮಂಜುನಾಥ್ ಗೌಡ ವಿರುದ್ಧ 3,826 ಮತಗಳಿಂದ ರತ್ನಾಕರ್ ಜಯ ಸಾಧಿಸಿದ್ದರು. 2013ರಲ್ಲಿ 1,343 ಮತಗಳ ಅಂತರದಿಂದ ಜ್ಞಾನೇಂದ್ರ ವಿರುದ್ಧ ಗೆದ್ದಿದ್ದ ರತ್ನಾಕರ್ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದರು. 2018ರಲ್ಲಿ 21.955 ಮತಗಳ ಅಂತರದಿಂದ ಜ್ಞಾನೇಂದ್ರ ಗೆದ್ದು ಮತ್ತೆ ಮೇಲುಗೈ ಸಾಧಿಸಿದ್ದರು. ಅಲ್ಲದೇ, ಗೃಹ ಸಚಿವರಾಗಿ ಪ್ರಮುಖ ಖಾತೆಯನ್ನೂ ಜ್ಞಾನೇಂದ್ರ ನಿರ್ವಹಿಸಿದ್ದಾರೆ.
ಮತ್ತೊಮ್ಮೆ ಜಿದ್ದಾಜಿದ್ದು: 2023ರ ಚುನಾವಣೆಯಲ್ಲೂ ರತ್ನಾಕರ್ - ಜ್ಞಾನೇಂದ್ರ ನಡುವೆ ಪೈಪೋಟಿ ಉಂಟಾಗಿದೆ. ಎರಡು ಪಕ್ಷಗಳ ಕೂಡ ಈ ಬಾರಿ ಸಹ ಇಬ್ಬರಿಗೆ ಮಣೆ ಹಾಕಿದ್ದು, ಗೆಲುವಿಗಾಗಿ ಶತಾಯಗತಾಯ ಪ್ರಯತ್ನ ಮಾಡಲಾಗುತ್ತಿದೆ. ಕಳೆದ ಚುನಾವಣೆಗಳಲ್ಲಿ ಬದ್ದ ವೈರಿಗಳಾಗಿದ್ದ ಕಿಮ್ಮನೆ ರತ್ನಾಕರ್ ಹಾಗೂ ಮಂಜುನಾಥ್ ಗೌಡ ಇಬ್ಬರೂ ಆರಗ ಜ್ಞಾನೇಂದ್ರರನ್ನು ಸೋಲಿಸಲು ಒಂದಾಗಿದ್ದಾರೆ. ಈ ಮೊದಲು ಇಬ್ಬರು ಕಾಂಗ್ರೆಸ್ ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದರು. ನಂತರ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್, ಇನ್ನೊಬ್ಬರಿಗೆ ಎಂಎಲ್ಸಿ ಸ್ಥಾನ ಎಂಬ ಹೈಕಮಾಂಡ್ನ ರಾಜಿ ಸೂತ್ರಕ್ಕೆ ಒಪ್ಪಿ, ಇಬ್ಬರೂ ಸಹ ಒಂದಾಗಿ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.
ಮತದಾರರ ಮಾಹಿತಿ: ತೀರ್ಥಹಳ್ಳಿ ಕ್ಷೇತ್ರದಲ್ಲಿ ಒಟ್ಟು 1,86,594 ಜನ ಮತದಾರರಿದ್ದು, ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. 92,141 ಪುರುಷ ಮತದಾರರಿದ್ದರೆ, 94,453 ಮಹಿಳೆಯರು ತಮ್ಮ ಮತ ಹಕ್ಕು ಹೊಂದಿದ್ದಾರೆ. ಒಕ್ಕಲಿಗರು ಹಾಗೂ ಈಡಿಗರು ನಿರ್ಣಾಯಕ ಮತದಾರರು.
ಇದನ್ನೂ ಓದಿ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕಮಲ ಕಟ್ಟಿಹಾಕಲು ಪ್ರತಿಪಕ್ಷಗಳ ರಣತಂತ್ರ: ಪ್ರಾಬಲ್ಯಕ್ಕಾಗಿ ಕೈ-ದಳ ಪೈಪೋಟಿ