ಶಿವಮೊಗ್ಗ: ಆರ್ಎಸ್ಎಸ್ ಈ ದೇಶದಲ್ಲಿ ಇರದಿದ್ದಿದ್ದರೆ ಹಿಂದುಗಳೇ ಉಳಿಯುತ್ತಿರಲಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಯಾವುದೋ ಒಂದು ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಹೋಗುತ್ತಾರೆ. ಪ್ರಜಾಪ್ರಭುತ್ವ, ಸಂವಿಧಾನ, ಮೀಸಲಾತಿ ವಿಚಾರ ಬರುತ್ತಿದ್ದಂತೆ ಅವರಿಗೆ ಆರ್ಎಸ್ಎಸ್ ಜ್ವರ ಶುರುವಾಗುತ್ತದೆ. ಆರ್ಎಸ್ಎಸ್ ಮೀಸಲಾತಿ, ಸಂವಿಧಾನ ಪ್ರಜಾಪ್ರಭುತ್ವ ವಿರೋಧ ಮಾಡುತ್ತಿದೆ. ಹೀಗಾಗಿ ಆರ್ಎಸ್ಎಸ್ ನಿರ್ನಾಮ ಆಗಬೇಕು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆರ್ಎಸ್ಎಸ್ ಇರದಿದ್ದರೆ ಈ ದೇಶದಲ್ಲಿ ಹಿಂದುಗಳೇ ಉಳಿಯುತ್ತಿರಲಿಲ್ಲ ಎಂದು ಹೇಳಿದರು.
ಆರ್ಎಸ್ಎಸ್ ಪ್ರಜಾಪ್ರಭುತ್ವ ಉಳಿಸಿದೆ, ಸಂವಿಧಾನಕ್ಕೆ ಒಳ್ಳೆಯ ಹೆಸರು ತಂದಿದೆ. ಆರ್ಎಸ್ಎಸ್ ಹಿಂದುಳಿದವರಿಗೆ, ದಲಿತರಿಗೆ, ಯಾರಿಗೆ ಮೀಸಲಾತಿ ನ್ಯಾಯ ಸಿಗಬೇಕೋ ಅದಕ್ಕಾಗಿ ಪ್ರಯತ್ನ ಮಾಡಿ ಯಶಸ್ವಿಯಾಗುತ್ತಿದೆ. ಸಿದ್ದರಾಮಯ್ಯ ಆರ್ಎಸ್ಎಸ್ ಟೀಕೆ ಮಾಡೋದು ಬಿಡಲಿಲ್ಲ ಅಂದರೆ ನಿಮ್ಮ ಪಕ್ಷ ನಿರ್ನಾಮ ಆಗ್ತದೆ, ನೀವೂ ನಿರ್ನಾಮ ಆಗ್ತೀರಿ ಎಂದರು.
ರಾಜ್ಯದ 224 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಹಾಕುತ್ತದೆ. ಈಗಾಗಲೇ ಕ್ಷೇತ್ರಗಳ ಬಗ್ಗೆ ಕೋರ್ ಕಮಿಟಿಯಲ್ಲಿ ಚರ್ಚೆ ನಡೆದಿದೆ. ಒಂದೊಂದು ಕ್ಷೇತ್ರಕ್ಕೆ ಮೂರು ಹೆಸರಿರುವ ಪಟ್ಟಿಯನ್ನು ಕಳುಹಿಸಿಕೊಟ್ಟಿದ್ದಾರೆ. ಕೇಂದ್ರದ ಚುನಾವಣಾ ಸಮಿತಿಯವರು ಕುಳಿತು ಚರ್ಚೆ ಮಾಡಿದ್ದಾರೆ. ಸೋಮವಾರ ಸಂಜೆ 170 ರಿಂದ 180 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ. ನಮ್ಮ ಕಾರ್ಯಕರ್ತರ ಅಪೇಕ್ಷೆಗೆ ತಕ್ಕಂತೆ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ಈ ಬಾರಿ ಪೂರ್ಣ ಪ್ರಮಾಣದ ಬಹುಮತ ನಮಗೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಈ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉಕ್ಕಿನ ಮನುಷ್ಯ ಗೃಹ ಮಂತ್ರಿ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಬಂದು ಹೋಗುತ್ತಿದ್ದಾರೆ. ರಾಷ್ಟ್ರದ ಬಿಜೆಪಿ ನಾಯಕರು ಚುನಾವಣೆ ಸಮಯದಲ್ಲಿ ರಾಜ್ಯಕ್ಕೆ ಬರುತ್ತಿರುವುದು ಕಾಂಗ್ರೆಸ್‍ನವರಿಗೆ ಭಯ ತಂದಿದೆ. ರಾಷ್ಟ್ರೀಯ ನಾಯಕರು ಬಂದು ಹೋಗುವುದಕ್ಕೂ ಟೀಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಯಾವುದೇ ಲಕ್ಷಣಗಳಿಲ್ಲ. ಹಾಗಾಗಿ ಟೀಕೆ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್‌ನವರು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಕರೆಸಿ ಅವರ ಮುಖ ತೋರಿಸಿ ವೋಟ್ ಕೇಳಲಿ. ರಾಹುಲ್ ಗಾಂಧಿ ಕೋಲಾರದ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದು ಹೇಳಿ ಈಗಾಗಲೇ ಮೂರು ಬಾರಿ ಮುಂದೂಡಿದ್ದೀರಿ. ನಿಮಗೆ ನಾಯಕರುಗಳೇ ಇಲ್ಲ. ನಮ್ಮಲ್ಲಿ ದೇಶ, ವಿಶ್ವ ಮೆಚ್ಚಿದ ನಾಯಕರುಗಳಿದ್ದಾರೆ. ಅದಕ್ಕೆ ನಾವು ಅವರನ್ನು ಕರೆಸುತ್ತಿದ್ದೇವೆ ಎಂದು ಕಾಂಗ್ರೆಸ್ಗೆ ತಿರುಗೇಟು ಕೊಟ್ಟರು.
ಎಂಎಲ್ಸಿ ಆಯನೂರು ಮಂಜುನಾಥ್ ಶಿವಮೊಗ್ಗದಲ್ಲಿ ಕಚೇರಿ ಆರಂಭಿಸಿರುವ ಬಗ್ಗೆ ಮಾತನಾಡಿ, ಯಾರು ಬೇಕಾದರೂ ಕಚೇರಿಯನ್ನು ಮಾಡಿಕೊಳ್ಳಬಹುದು. ಆಫೀಸ್ ಮಾಡುವವರನ್ನು ಯಾರಿಗಾದರೂ ತಡೆಯಲು ಆಗುತ್ತಾ. ಯಾರು ಬೇಕಾದರೂ ಆಫೀಸ್ ಮಾಡಿಕೊಳ್ಳಬಹುದು ಪ್ರಜಾಪ್ರಭುತ್ವ ಇರೋದೇ ಅದಕ್ಕೆ ಎಂದರು.
ಇದನ್ನೂ ಓದಿ: ದೇಶಕ್ಕೆ ಮಾದರಿಯಾಗುವಂತಹ ಪ್ರಣಾಳಿಕೆ ಸಿದ್ಧ, ವಾರದೊಳಗೆ ಬಿಡುಗಡೆ: ಡಾ.ಸುಧಾಕರ್