ಶಿವಮೊಗ್ಗ: ರಾಜ್ಯದ ಪಠ್ಯ ಪುಸ್ತಕದಲ್ಲಿ ಭಾರತೀಯ ಸಂಸ್ಕೃತಿಯನ್ನು ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆ ಬರಗೂರು ರಾಮಚಂದ್ರಪ್ಪ ಅಧ್ಯಕ್ಷರಾದ ಅವಧಿಯಲ್ಲಿ ಅವರ ವಿಚಾರಕ್ಕೆ ತಕ್ಕಂತೆ ಪಠ್ಯ ಪುಸ್ತಕಗಳನ್ನು ತಂದಿದ್ದರು. ಇವತ್ತು ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯನ್ನು ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಯಾವುದು ಸರಿ ಇಲ್ಲ ಎಂಬ ಅಂಶದ ಬಗ್ಗೆ ಪ್ರಾಮಾಣಿಕವಾಗಿ ತಿದ್ದಿಕೊಳ್ಳಿ ಎಂದು ಹೇಳಿ ತಿದ್ದಿಸಬೇಕಿತ್ತು. ಆದರೆ, ಇದರಲ್ಲಿ ರಾಜಕೀಯ ತಂದು, ಅವರ ವೈಚಾರಿಕ ಸಿದ್ದಾಂತಗಳನ್ನು ಇಲ್ಲಿಗೆ ತಂದು ರಾಜ್ಯದಲ್ಲಿ ಗೊಂದಲ ಸೃಷ್ಟಿಸುವ ಕೆಲಸವನ್ನು ಕೆಲವು ಸಾಹಿತಿಗಳು ಮಾಡುತ್ತಿದ್ದಾರೆ. ಯಾವುದು ಸರಿ ಇಲ್ಲ ಎಂಬುದನ್ನು ಮಾಧ್ಯಮಗಳಿಗೆ ಹೇಳಿಕೆ ನೀಡುವುದು, ನಮ್ಮ ಪಠ್ಯವನ್ನು ವಾಪಸ್ ತೆಗೆದುಕೊಳ್ಳಿ ಎಂದು ಹೇಳುವ ಮೂಲಕ ಸಾಹಿತಿಗಳು ಸಹ ರಾಜಕೀಯ ಮಾಡುತ್ತಿದ್ದಾರೆ. ಒಂಬತ್ತು ಜನ ನಮ್ಮ ಪಠ್ಯ ಬೇಡ ಎಂದು ಪತ್ರ ಬರೆದಿದ್ದಾರೆ.
ಅದರಲ್ಲಿ ಏಳು ಜನ ಸಾಹಿತಿಗಳ ಪಠ್ಯವನ್ನು ಪುಸ್ತಕದಲ್ಲಿ ಹಾಕಿಯೇ ಇಲ್ಲ. ಇದರಲ್ಲಿ ಎಷ್ಟು ರಾಜಕಾರಣ ಇದೆ ನೋಡಿ. ಪಠ್ಯದಲ್ಲಿ ಯಾವುದು ಸತ್ಯ ಎಂಬುದನ್ನು ಮಕ್ಕಳಿಗೆ ತಿಳಿಸಬೇಕಿದೆ. ಅಮೃತ ಮಹೋತ್ಸವ ಬರುವವರೆಗೂ ನಮ್ಮ ಸಂಸ್ಕೃತಿಯನ್ನು ತಿಳಿಸುವ ಕೆಲಸ ಮಾಡಿಲ್ಲ. ಟಿಪ್ಪು ಮೈಸೂರು ಹುಲಿ, ಅಲೆಕ್ಸಾಂಡರ್ ದಿ ಗ್ರೇಟ್ ಎಂದು ತಿಳಿಸಿದ್ದಾರೆ.
ನಮ್ಮಲ್ಲಿ ಯಾರೂ ಗ್ರೇಟ್ ಅಂತಾ ಇರಲಿಲ್ವ?.. ನಮ್ಮ ದೇಶದಲ್ಲಿ ಒಳ್ಳೆ ಆಡಳಿತಗಾರರು ಇರಲಿಲ್ವಾ?. ಒಬ್ಬರನ್ನಾದರೂ ಮೈಸೂರು ಹುಲಿ ಅಂತಾ ಕರೆದಿದ್ದೇವೆಯೇ?. ನಮ್ಮಲ್ಲಿ ಯಾರೂ ಗ್ರೇಟ್ ಅಂತಾ ಇರಲಿಲ್ವಾ ಎಂದು ಪ್ರಶ್ನಿಸಿದರು. ನಮ್ಮ ದೇಶದ ಮಹಾಪುರುಷರ ಬಗ್ಗೆ ಹೇಳಬಾರದಾ? ಯಾವುದಾದರೂ ವ್ಯತ್ಯಾಸವಾಗಿದ್ದರೆ ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ. ಅವರ ವಿರೋಧ ಮಾಡುವುದನ್ನು ನಾವು ನೋಡುತ್ತೇವೆ. ಮಕ್ಕಳಿಗೆ ಒಳ್ಳೆಯದು ತಿಳಿಸಬೇಕು ಎಂದರು.
ಓದಿ: ಎರಡು ಪಕ್ಷದ ಆತ್ಮಸಾಕ್ಷಿ ಮತಗಳು ಕಾಂಗ್ರೆಸ್ಗೆ ಬರುತ್ತವೆ : ಸಿದ್ದರಾಮಯ್ಯ ವಿಶ್ವಾಸ