ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿರವರ ಹೆಸರನ್ನು ಸುಲಭ ಶೌಚಾಲಯಕ್ಕೆ ಇಡಬೇಕೆಂದು ಹೇಳಿರುವ ಕಾಂಗ್ರೆಸ್ನ ಬಿ ಕೆ ಹರಿಪ್ರಸಾದ್ ಅವರು ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ಹೇಳಬೇಕಿತ್ತು. ಅವರಿಗೆ ಪಕ್ಷವೇ ಬುದ್ಧಿ ಹೇಳಬೇಕಿತ್ತು ಎಂದು ಸಚಿವ ಕೆ ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿರವರನ್ನು ಪ್ರಪಂಚವೇ ಮೆಚ್ಚುತ್ತಿದೆ. ಆದರೆ, ಇಂತವರ ಹೆಸರನ್ನು ಸುಲಭ ಶೌಚಾಲಯಕ್ಕೆ ಇಡಬೇಕು ಎಂದು ಹೇಳಿದ್ರೆ, ಯಾರಿಗೆ ತಾನೇ ಸಿಟ್ಟು ಬರಲ್ಲ ಹೇಳಿ?. ನಾನು ಬಳಸಿದ ಪದದ ಬಗ್ಗೆ ನಾನು ಅಲ್ಲೇ ಕ್ಷೆಮೆಯಾಚಿಸಿದ್ದೇನೆ. ಆದರೆ, ಕಾಂಗ್ರೆಸ್ನವರು ಅದನ್ನು ದೊಡ್ಡದಾಗಿ ಮಾಡುತ್ತಿದ್ದಾರೆ. ನನ್ನ ವಿರುದ್ಧ ಪ್ರತಿಭಟನೆ ಮಾಡಿದ್ರೆ ಮಾಡಲಿ ಎಂದರು.
ಕರೆದು ಬುದ್ಧಿ ಹೇಳುತ್ತಾರಾ?: ನಾನು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಪಕ್ಷದ ಎಲ್ಲಾ ಮುಖಂಡರ ಕುರಿತು ಟೀಕೆ ಮಾಡಿಲ್ಲ. ಹರಿಪ್ರಸಾದ್ ಅವರು ಕ್ಷಮೆಯಾಚಿಸಬೇಕು. ಇವರ ಕುರಿತು ಡಿ ಕೆ ಶಿವಕುಮಾರ್ ಏನು ಕ್ರಮ ತೆಗೆದುಕೊಳ್ಳುತ್ತಾರೆ. ಸಿದ್ದರಾಮಯ್ಯ ಕರೆದು ಬುದ್ಧಿ ಹೇಳುತ್ತಾರಾ?. ನಾನು ಬಳಸಿದ ಪದದ ಬಗ್ಗೆ ಕ್ಷಮೆ ಕೇಳಿದ್ದೇನೆ. ಅದೇ ರೀತಿ ಹರಿಪ್ರಸಾದ್ ಕ್ಷಮೆ ಕೇಳುತ್ತಾರಾ? ಎಂದರು.
ರಾಜ್ಯಸಭಾ-ಲೋಕಸಭೆ ಹೈಜಾಕ್ : ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ದೇಶದ ಅನೇಕ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ನಡೆಸಬೇಕಿತ್ತು. ಆದರೆ, ಅಲ್ಲಿ ಕಲಾಪವನ್ನು ಹೈಜಾಕ್ ಮಾಡಲಾಗುತ್ತಿದೆ. ಈ ರೀತಿ ಕಲಾಪವನ್ನು ಹೈಜಾಕ್ ಮಾಡಿದವರು ಭಯೋತ್ಪಾದಕರಿಗೆ ಸಮಾನರು ಎಂದರು. ಒಬಿಸಿ ಜಾರಿಯ ಕುರಿತು ಕೇಂದ್ರ ಈಗ ರಾಜ್ಯ ಸರ್ಕಾರಗಳಿಗೆ ಜವಾಬ್ದಾರಿ ವಹಿಸಿರುವುದು ಸಂತಸ ತಂದಿದೆ. ಮುಂದೆ ರಾಜ್ಯಗಳು ಇದನ್ನು ಯಶಸ್ವಿಯಾಗಿ ನಿರ್ವಹಿಸುತ್ತವೆ ಎಂದು ಹೇಳಿದರು.
ತಿಳಿದು ಮಾತನಾಡುವೆ : ಹಿಂದೆ ಬಿಜೆಪಿಯನ್ನು ಹಿಂದೂಗಳ ಪಕ್ಷ ಎನ್ನುತ್ತಿದ್ದರು. ಭಟ್ರು, ಶೆಟ್ರು ಪಕ್ಷ ಅಂತಾ ಕರೆಯುತ್ತಿದ್ದರು. ಈಗ ಬಿಜೆಪಿಯ ಜೊತೆ ಮುಸ್ಲಿಮರು ಬರುತ್ತಿದ್ದಾರೆ. ಸಿ ಟಿ ರವಿ ಅವರು ಇಂದಿರಾಗಾಂಧಿ ಕ್ಯಾಂಟೀನ್ ಬಗ್ಗೆ ಮಾತನಾಡಿರುವುದು ನನಗೆ ತಿಳಿದಿಲ್ಲ. ಅದರ ಬಗ್ಗೆ ತಿಳಿದು ಮಾತನಾಡುವೆ ಎಂದರು.
ಈಶ್ವರಪ್ಪನವರಿಗೆ ಹೆಚ್ಚಿನ ಭದ್ರತೆ : ಸಚಿವ ಕೆ. ಎಸ್ ಈಶ್ವರಪ್ಪ ಅವರು ಕಾಂಗ್ರೆಸ್ ಪಕ್ಷದ ಕುರಿತ ಹೇಳಿಕೆಯಿಂದ ರಾಜ್ಯಾದ್ಯಂತ ಪ್ರತಿಭಟಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಈಶ್ವರಪ್ಪನವರಿಗೆ ಪೊಲೀಸ್ ಎಸ್ಕಾರ್ಟ್ ಜೊತೆಗೆ ಡಿಆರ್ ಪೊಲೀಸ್‌ನ ಒಂದು ವ್ಯಾನ್ ಹಾಗೂ ಒಂದು ಟ್ರಾಫಿಕ್ ಪೊಲೀಸ್ ಪಿಎಸ್ಐ ವಾಹನವನ್ನು ಭದ್ರತೆಗೆ ನೀಡಿದ್ದಾರೆ. ಶಿವಮೊಗ್ಗದಂತಹ ಸಣ್ಣ ಸಿಟಿಯಲ್ಲಿ ಈ ರೀತಿಯ ಭದ್ರತೆ ಅವಶ್ಯಕತೆ ಇತ್ತೇ? ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ಓದಿ: ಸಿ ಟಿ ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹೆಚ್ಡಿ ಕುಮಾರಸ್ವಾಮಿ