ಶಿವಮೊಗ್ಗ : ಸಭಾಧ್ಯಕ್ಷರು ಒಂದು ರೀತಿಯಲ್ಲಿ ಆಡಳಿತ ಪಕ್ಷದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾನೂನನ್ನು ದುರುಪಯೋಗ ಹೇಗೆ ಮಾಡಿಕೋಳ್ಳಬೇಕು ಎನ್ನುವಷ್ಟು ಬುದ್ದಿವಂತರಿದ್ದಾರೆ ಎಂದು ಸ್ಪೀಕರ್ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಗುಡುಗಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಪ್ರಾಮಾಣಿಕ ಶಾಸಕರು ಈ ಸರ್ಕಾರದ ಬಗ್ಗೆ ಅತೃಪ್ತಿ ಹೊಂದಿದ್ದಾರೆ. ಗೆದ್ದು ಕಳುಹಿಸಿದ ಮತದಾರರಿಗೆ ನ್ಯಾಯ ಕೊಡಿಸಲು ಆಗಲಿಲ್ಲ ಎಂಬುದನ್ನರಿತು ತಮಗೆ ಕಷ್ಟವಾದರೂ ಪರವಾಗಿಲ್ಲ ಎಂದು ರಾಜೀನಾಮೆ ನೀಡಿದ್ದಾರೆ ಎಂದರು.
ಸಭಾಧ್ಯಕ್ಷರು ಒಂದು ರೀತಿಯಲ್ಲಿ ಆಡಳಿತ ಪಕ್ಷದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾನೂನನ್ನು ದುರುಪಯೋಗ ಹೇಗೆ ಮಾಡಿಕೋಳ್ಳಬೇಕು ಎನ್ನುವಷ್ಟು ಬುದ್ದಿವಂತರಿದ್ದಾರೆ. ಹಾಗಾಗಿ ಏನು ಮಾಡಬೇಕು ಎಂಬುವುದನ್ನ ಚಿಂತಿಸಲು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಈ ಸರ್ಕಾರ ಬಿದ್ದು ಹೋಗುತ್ತೆ. ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ವಿಶ್ವಾಸ ಮತಯಾಚನೆ ಮಾಡುತ್ತೇನೆ ಎಂದಿದ್ದಾರೆ. ವಿಶ್ವಾಸಮತಯಾಚನೆ ಯಶಸ್ವಿ ಆಗಲ್ಲ. ಸರ್ಕಾರ ಬಿದ್ದು ಹೋಗುತ್ತದೆ ಎಂದು ಭವಿಷ್ಯ ನುಡಿದರು. ನಮ್ಮ ಶಾಸಕರನ್ನೂ ಮುಟ್ಟಬಹುದು ಎನ್ನುವ ಭಾವನೆ ಬಂದಿರುವುದರಿಂದ, ನಮ್ಮ ಶಾಸಕರನ್ನು ಒಂದು ಕಡೆ ಸೇರಿಸಿದ್ದೇವೆ. ಹಾಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವಿದ್ದೇವೆ ಎಂದರು.
ಸಚಿವ ಸಾ ರಾ ಮಹೇಶ್ ಭೇಟಿ ಕುರಿತು ಮಾತನಾಡಿದ ಅವರು, ಆಕಸ್ಮಿಕವಾಗಿ ಸಿಕ್ಕರು. ದೇವಸ್ಥಾನಕ್ಕೆ ದುಡ್ಡು ಕೊಡುತ್ತೇನೆ ಎಂದಿದ್ದರು. ಅದಕ್ಕೆ ದುಡ್ಡು ಕೋಡಪ್ಪ ಅಂತಾ ಕೇಳಿದೆ ಅಷ್ಟೇ.. ಅದನ್ನೇ ಮಾಧ್ಯಮದವರು ಬಳಸಿಕೊಂಡು ಸುಳ್ಳು ಸುದ್ದಿ ಮಾಡುತ್ತಿದ್ದಾರೆ. ನನ್ನನ್ನು ಬಳಸಿಕೊಂಡು ನಿಮ್ಮ ಚಾನಲ್‌ಗಳ ಟಿಆರ್ಪಿ ಹೆಚ್ಚಿಸಿಕೊಳ್ಳುವುದಾದರೆ, ನನ್ನದೇನೂ ಅಭ್ಯಂತರ ಇಲ್ಲ ಎಂದರು.