ಶಿವಮೊಗ್ಗ: ಈಗ ನಮ್ಮದೇ ಸರ್ಕಾರ ದೇಶಾದ್ಯಂತ ಅಧಿಕಾರದಲ್ಲಿದೆ. ಹಾಗಾಗಿ ನಮ್ಮ ಒಬ್ಬನೇ ಒಬ್ಬ ಕಾರ್ಯಕರ್ತನ ಮೈ ಮುಟ್ಟಿ ನೋಡಲಿ ಅದರ ಪರಿಣಾಮವೇ ಬೇರೆಯಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಇಂದು ನಡೆದ ಬಿಜೆಪಿ ನಗರ ಕಾರ್ಯಕಾರಣಿ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಕೇವಲ ಅಧಿಕಾರಕ್ಕೆ ಇರುವ ಪಕ್ಷ ಅಲ್ಲ. ರಾಷ್ಟ್ರೀಯ ವಿಚಾರಧಾರೆ ಹಾಗೂ ಸಿದ್ಧಾಂತವನ್ನು ಹೊಂದಿರುವ ಪಕ್ಷ. ಈ ವಿಷಯವನ್ನು ಜನರಿಗೆ ಮುಟ್ಟಿಸಿ ಅವರ ಮನ ಗೆಲ್ಲಲು ಅಸಂಖ್ಯಾತ ಕಾರ್ಯಕರ್ತರು ಶ್ರಮ ವಹಿಸಿದ್ದಾರೆ. ಒಂದು ಕಾಲಕ್ಕೆ ನಮ್ಮ ಸಂಘಟನೆ ಬಹಳ ದುರ್ಬಲವಾಗಿತ್ತು. ಆಗ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಾಗ ನಮ್ಮ ಹಿರಿಯರು ಬಿ ಕಾಂ, ಬಿ ಕೂಲ್ ಎನ್ನುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ ಎಂದಿದ್ದಾರೆ.
ದೇಶಾದ್ಯಂತ ಎಲ್ಲಾ ಹಂತಗಳಲ್ಲಿ ಪಕ್ಷ ಅಧಿಕಾರದಲ್ಲಿದೆ. ಕೇರಳ ಸೇರಿದಂತೆ ಎಲ್ಲೆಡೆ ಸಂಘಟನೆ ಬಲವಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆದರೆ ಸಂಘಟನೆಯ ಪ್ರಮುಖರು ಬಿ ಕಾಂ ಎಂದು ಹೇಳುವ ಬದಲು ಬಿ ಫೇಸ್ ವಿತ್ ಸೇಮ್ ಸ್ಟಿಕ್ ಎಂದು ಹೇಳುತ್ತಾರೆ. ಅಷ್ಟರ ಮಟ್ಟಿಗೆ ನಾವು ಸಂಘಟನಾತ್ಮಕವಾಗಿ ಶಕ್ತಿಯುತವಾಗಿ ಹೊರಹೊಮ್ಮಿದ್ದೇವೆ.
ಆದರೆ, ಇಷ್ಟಕ್ಕೆ ಮೈ ಮರೆಯಬಾರದು. ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಸೇರಿದಂತೆ ಪ್ರತಿ ಸಂದರ್ಭದಲ್ಲೂ ಸದಾ ಜಾಗೃತವಾಗಿ ಕೆಲಸ ಮಾಡಬೇಕಿದೆ ಎಂದಿದ್ದಾರೆ.
ಓದಿ: ಜೀವ ವೈವಿಧ್ಯ ದಿನಾಚರಣೆ: ಅರಣ್ಯಾಧಿಕಾರಿಗಳಿಂದ 'ಹಣಬೆ' ಕೆರೆಯಲ್ಲಿ ಪಕ್ಷಿ ವೀಕ್ಷಣೆ